ಬೆಂಗಳೂರು : ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಸಂದರ್ಭದಲ್ಲಿ ಕರ ಸೇವಕನ ಬಂಧನ ಆಗಿರುವುದು ಕಾಕತಾಳೀಯ ಅಷ್ಟೇ. ಸುಮ್ಮನೆ ರಾಜಕೀಯ ಉದ್ದೇಶದಿಂದ ಟೀಕೆ ಮಾಡಬಾರದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಹಿಂದೂ ಸಂಘಟನೆಯವರ ಬಂಧನ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರೂ ಸಹಾ ಸರ್ಕಾರ ನಡೆಸಿದ್ದಾರೆ. ನಿರ್ದಿಷ್ಟವಾಗಿ ಅದೊಂದೇ ಕೇಸ್ ಆಗಿಲ್ಲ. ಎಲ್ಲ ಪ್ರಕರಣಗಳನ್ನೂ ಪರಾಮರ್ಶೆ ಮಾಡುವಾಗ ಇದೂ ಆಗಿದೆ. ನೆಲದ ಕಾನೂನಿನ ಪ್ರಕಾರ ಮಾಡಿದ್ದಾರೆ ಎಂದರು.
ಬಾಕಿ ಉಳಿದ ಪ್ರಕರಣಗಳಲ್ಲಿ ಅರೆಸ್ಟ್ ಆದವರು ಹಿಂದೂಗಳಲ್ವಾ?. ಅವರಿಗೊಂದು ನ್ಯಾಯ ಇವರಿಗೊಂದು ನ್ಯಾಯವಾ?. ಕಾನೂನು ಪ್ರಕಾರ ಏನು ಆಗುತ್ತದೆಯೋ ಆಗುತ್ತದೆ. ಇದು ಕೇವಲ ಹುಬ್ಬಳ್ಳಿಯಲ್ಲಿ ಮಾತ್ರವಲ್ಲ. ಎಲ್ಲಾ ಕಡೆಯೂ ಹಳೆಯ ಪ್ರಕರಣಗಳ ಪರಾಮರ್ಶೆ ಮಾಡುತ್ತಿದ್ದೇವೆ. ಈ ಕಡೆಯಾದರೂ ನ್ಯಾಯ ಆಗಬೇಕು ಅಥವಾ ಆ ಕಡೆಯಾದರೂ ಆಗಬೇಕು ಎಂದು ಪರಮೇಶ್ವರ್ ಹೇಳಿದರು.
ನಮಗೇನೂ ಕಮಿಷನರ್ ಗಮನಕ್ಕೆ ತಂದು ಅರೆಸ್ಟ್ ಮಾಡಿಲ್ಲ. ನಮ್ಮ ಪೊಲೀಸರಿಗೆ ಕಾನೂನು ಪುಸ್ತಕ ಕೊಟ್ಟಿಲ್ವಾ?. ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ಚುನಾವಣೆ ಗಿಮಿಕ್ ಮಾಡೋದು ಸರಿಯಲ್ಲ : ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಇದೇ ವಿಚಾರವಾಗಿ ಮಾತನಾಡಿರುವ ಶಾಸಕ ಪ್ರಸಾದ ಅಬ್ಬಯ್ಯ, ಆರ್. ಅಶೋಕ್ ಅವರು ವಿಪಕ್ಷ ನಾಯಕನಾಗಿ ಅಭಿವೃದ್ಧಿ ವಿಚಾರವಾಗಿ ಪ್ರತಿಭಟನೆ ಮಾಡಲಿ. ಅದು ಬಿಟ್ಟು ಯಾವೋದು ವಿಚಾರ ಇಟ್ಟಕೊಂಡು ಚುನಾವಣೆ ಗಿಮಿಕ್ ಮಾಡೋದು ಸರಿಯಲ್ಲ. ಬಿಜೆಪಿಗೆ ಚುನಾವಣೆ ಸಮಯದಲ್ಲಿ ಯಾವುದಾದರೂ ಒಂದು ವಿಷಯ ಬೇಕು. ಜನರ ಕೋಮು ಸೌಹಾರ್ದತೆ ಹಾಳು ಮಾಡುವುದನ್ನು ಬಿಜೆಪಿ ಮೊದಲಿನಿಂದಲೂ ಮಾಡುತ್ತಿದೆ. ರಾಮ ಜನ್ಮಭೂಮಿ ಹೋರಾಟಗಾರರ ಬಂಧನ ಪ್ರಕರಣದಲ್ಲಿ ಪೊಲೀಸರು ತಮ್ಮ ದಿನನಿತ್ಯದ ಕೆಲಸ ಮಾಡಿದ್ದಾರೆ. ಬಿಜೆಪಿಗರು ತಮಗೆ ಹೇಗೆ ಬೇಕೊ ಹಾಗೇ ತಿರುಚಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಹುಬ್ಬಳ್ಳಿ ಈದ್ಗಾ ವಿಷಯದಿಂದ ಬಿಜೆಪಿ ದೇಶದಲ್ಲಿ ನಲೆಯೂರಿತ್ತು. ಈಗ ಇಂತಹದ್ದೇ ವಿಷಯ ಹುಡುಕುತ್ತಾರೆ. ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ, ಗೊಂದಲ ಸೃಷ್ಟಿ ಮಾಡೋದು, ಜನರ ಭಾವನೆ ಕೆರಳಿಸೋದು ಬಿಜೆಪಿ ಅಜೆಂಡಾವಾಗಿದೆ. ಹಳೇ ಹುಬ್ಬಳ್ಳಿ ಗಲಭೆಯಲ್ಲಿ 90% ಅಮಾಯಕರನ್ನು ವರ್ಷಾನುಗಟ್ಟಲೆ ಜೈಲಿಗೆ ಹಾಕಿ ಹಾಳು ಮಾಡಿದ್ದು ರಾಜಕಾರಣ ಅಲ್ಲವಾ?. ಇದು ಕೋರ್ಟ್ ನಿರ್ದೇಶನ ಪ್ರಕರಣದ ತನಿಖೆ ನಡೆದಿದೆ ಎಂದು ಪ್ರಸಾದ್ ಅಬ್ಬಯ್ಯ ಹೇಳಿದರು.
ಇದನ್ನೂ ಓದಿ : ರಾಮಮಂದಿರ ಉದ್ಘಾಟನೆಗೆ ಅಡ್ವಾಣಿ ಬರಬಾರದು ಎನ್ನುವುದು ಎಷ್ಟು ಸರಿ?: ಮಾಜಿ ಡಿಸಿಎಂ ಲಕ್ಷ್ಮಣ ಸವದಿ