ಬೆಂಗಳೂರು: ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಸರ್ಕಾರ ಸುಭದ್ರವಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಸಮರ್ಥ ಮುಖ್ಯಮಂತ್ರಿಯಾಗಿದ್ದು, ನೆರೆ, ಕೊರೊನಾದಂತಹ ಎಲ್ಲ ಪರಿಸ್ಥಿತಿಯನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಇನ್ನೂ ಮೂರು ವರ್ಷ ಬಿಜೆಪಿ ಸರ್ಕಾರ ಸುಭದ್ರವಾಗಿರಲಿದೆ ಎಂದು ಹೇಳಿದರು.
ಇಷ್ಟು ದಿನ ಲಾಕ್ಡೌನ್ ಇದ್ದ ಕಾರಣ ಹೋಟೆಲ್ಗಳೆಲ್ಲ ಮುಚ್ಚಿವೆ. ಹೀಗಾಗಿ ಆತ್ಮೀಯರ ಮನೆಯಲ್ಲಿ ಔತಣಕ್ಕೆ ಸೇರುವುದು ಸಭೆ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಚರ್ಚಿಸಲು ಅವಕಾಶವಿದೆ. ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳು ಬರುತ್ತಿರುವುದರಿಂದ ಈ ಬಗ್ಗೆ ಸಹಜವಾಗಿ ಚರ್ಚಿಸಿರಬಹುದಷ್ಟೆ ಎಂದರು. ಯತ್ನಾಳ್ ಹೇಳಿಕೆ ಅವರ ವೈಯಕ್ತಿಕ ವಿಷಯ. ಆ ಬಗ್ಗೆ ತಾವು ಪ್ರತಿಕ್ರಿಯಿಸುವುದು ಸರಿಯಲ್ಲ ಎಂದ ಸಚಿವರು, ಕುಟುಂಬದ ಸದಸ್ಯರು ಸಲಹೆ ಸೂಚನೆ ಕೊಡಬಹುದು. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಜನರ ಕಷ್ಟ ನಷ್ಟದ ಬಗ್ಗೆ ಜನಪ್ರತಿನಿಧಿಗಳಾದವರಿಗೆ ಅವರ ಕುಟುಂಬಸ್ಥರು ಗಮನಕ್ಕೆ ತರಬಹುದು ಎಂದು ಹೇಳಿದರು.
ಮಿಡತೆಗಳು ರಾಜ್ಯಕ್ಕೆ ಎಂಟ್ರಿ ಕೊಡುವುದು ತೀರಾ ಕಡಿಮೆ. ಕಾರಣ, ಮಿಡತೆಗಳು ಮಧ್ಯಪ್ರದೇಶದ ಕಡೆ ಹೋಗುತ್ತಿವೆ. ಹಾಗಾಗಿ ಕೊಪ್ಪಳ, ಯಾದಗಿರಿ, ಬೀದರ್ ಜಿಲ್ಲೆಗಳ ರೈತರು ಆತಂಕಪಡುವ ಅಗತ್ಯ ಇಲ್ಲ ಎಂದು ಸಚಿವರು ತಿಳಿಸಿದರು.