ಬೆಂಗಳೂರು: ಸ್ವಚ್ಛ ಭಾರತ ಮಿಷನ್ ಅಡಿ ಕೆಲಸ ತುಂಬ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಪೌರಾಡಳಿತ ಸಚಿವ ನಾರಾಯಣ ಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಿಕಾಸಸೌಧದಲ್ಲಿ ಪೌರಾಡಳಿತ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ನಾರಾಯಣ ಗೌಡ, ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಸಾಕಷ್ಟು ಅನುದಾನ ಇದ್ದರೂ ಈ ವಿಳಂಬ ಯಾಕೆ. ತೀವ್ರಗತಿಯಲ್ಲಿ ಕೆಲಸ ಆಗಬೇಕು. ಸ್ವಚ್ಛ ಭಾರತ ಮಿಷನ್ ನಲ್ಲಿ ಈವರೆಗೆ ಶೇ 10ರಷ್ಟು ಕೂಡ ಕೆಲಸ ಆಗಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ. 15 ದಿನದಲ್ಲಿ ಪ್ರಗತಿ ತೋರಿಸದಿದ್ದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ಲಾಸ್ಟಿಕ್ ನಿಷೇಧವಾಗಿ 5 ವರ್ಷ ಆಗಿದೆ. ಆದರೆ, ಇದುವರೆಗೂ ಸರಿಯಾಗಿ ಕಾರ್ಯ ರೂಪಕ್ಕೆ ಬಂದಿಲ್ಲ. ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ. ಡ್ರೈನೇಜ್ಗಳಲ್ಲಿ ಪ್ಲಾಸ್ಟಿಕ್ ಕಸವೆ ತುಂಬಿಕೊಂಡಿದೆ. ಇದಕ್ಕೆಲ್ಲ ಯಾರು ಜವಾಬ್ದಾರರು. ನಿಷೇಧವಿದ್ದರೂ ಇಷ್ಟೊಂದು ಪ್ಲಾಸ್ಟಿಕ್ ಬಳಕೆಯಾಗಲು ಕಾರಣವೇನು. ಪ್ಲಾಸ್ಟಿಕ್ ನೀರಿನ ಬಾಟಲ್ ಸೇರಿದಂತೆ ನಿತ್ಯ ಬಳಕೆಯಾಗುವ ಪ್ಲಾಸ್ಟಿಕ್ ನಿಷೇಧ ಆಗಬೇಕು. ಮಣ್ಣಿನಲ್ಲಿ ಕರಗುವಂತಹ ಪ್ಲಾಸ್ಟಿಕ್ ಮಾರುಕಟ್ಟೆಗೆ ಬರಲಿ. ಪ್ಲಾಸ್ಟಿಕ್ ವಸ್ತು ಉತ್ಪಾದಿಸುವ ಘಟಕಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಅಧಿಕಾರಿಗಳು ಸರಿಯಾಗಿ ಕ್ರಮ ತೆಗೆದುಕೊಳ್ಳದ ಕಾರಣ ಅವ್ಯಾಹತವಾಗಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ತಕ್ಷಣ ಇದು ನಿಲ್ಲಬೇಕು ಎಂದು ಸಚಿವರು ಸೂಚಿಸಿದ್ದಾರೆ.
ಅಲ್ಲದೇ ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ. ದಂಡ ವಿಧಿಸುವ ಕಾರ್ಯ ಆಗುತ್ತಿಲ್ಲ. ಕೆಲವೆಡೆ ಕಸ ಡಂಪ್ ಮಾಡಲಾಗುತ್ತಿದೆ. ಸಂಸ್ಕರಣೆ ಆಗುತ್ತಿಲ್ಲ. ಕಸ ಹಾಕಲು ಜಾಗದ ಸಮಸ್ಯೆ ಇದೆ. ಅದನ್ನೂ ಪರಿಹರಿಸಿಲ್ಲ. ಕೇವಲ ಮೀಟಿಂಗ್ನಲ್ಲಿ ಸೂಚನೆ ಕೊಡುವುದು ಮಾತ್ರ ಆಗಿದೆ. ಅಧಿಕಾರಿಗಳು ಕಾರ್ಯಪ್ರವೃತ್ತರಾಗುತ್ತಿಲ್ಲ. ಹೀಗೇ ಆದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಚಿವರು ಎಚ್ಚರಿಸಿದ್ದಾರೆ.
ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಮಳಿಗೆಗಳ ಬಾಡಿಗೆ ಪರಿಷ್ಕರಣೆ ಆಗಬೇಕು. ಪ್ರತಿ ಸಿಟಿಯಲ್ಲಿ ವಿದ್ಯುತ್ ಚಿತಾಗಾರ ಸ್ಥಾಪಿಸಬೇಕು. ಸ್ಮಶಾನಕ್ಕೆ ಸ್ಥಳ ಗುರುತಿಸಬೇಕು ಎಂದು ಸೂಚಿಸಿದರು.
ರೇಷ್ಮೆ ಮಾರುಕಟ್ಟೆಯಲ್ಲಿ ಆನ್ಲೈನ್ ವಹಿವಾಟು ಇನ್ನೂ ಸರಿಯಾಗಿ ಜಾರಿಯಾಗಿಲ್ಲ. ರೀಲರ್ಸ್ ಹಾಗೂ ರೈತರು ಆನ್ಲೈನ್ ವ್ಯವಹಾರಕ್ಕೆ ಸಿದ್ದರಿದ್ದಾರೆ. ಆದ್ರೆ ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಇದು ಜಾರಿಯಾಗಿಲ್ಲ. ರೈತರಿಗೆ ಮಾಹಿತಿ ನೀಡಲು ಮಾರುಕಟ್ಟೆಯಲ್ಲಿ ಫಲಕ ಅಳವಡಿಸಬೇಕು. ಜನವರಿ ಅಂತ್ಯದೊಳಗೆ ಆನ್ಲೈನ್ ವಹಿವಾಟು ಜಾರಿಯಾಗಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ಕ್ರಮವಹಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.