ಬೆಂಗಳೂರು/ಬೆಳಗಾವಿ : ನಾವು ಯಡಿಯೂರಪ್ಪನವರ ಮೇಲೆ ವಿಶ್ವಾಸ ಇಟ್ಟು ಬಂದವರು. ಅವರು, ಸಿಎಂ ಆಗಿ ಮುಂದುವರೆಯುವುದರಲ್ಲಿ ಯಾವುದೇ ಸಂಶಯ ಇಲ್ಲ. ಸಿಎಂ ಬದಲಾವಣೆ ಸತ್ಯಕ್ಕೆ ದೂರವಾದದ್ದು ಎಂದು ಸಚಿವ ನಾರಾಯಣಗೌಡ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಸಿಎಂ ಆಗಿ ಯಡಿಯೂರಪ್ಪನವರು ಮುಂದುವರಿಯುತ್ತಾರೆ. ಆ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದರು.
ಸಿಎಂ ಬದಲಾವಣೆ ಊಹಾಪೋಹ : ರಾಜ್ಯದಲ್ಲಿ ಸಿಎಂ ಬದಲಾವಣೆಯಾಗುತ್ತದೆ ಎಂಬುದು ಕೇವಲ ಊಹಾಪೋಹಾವಷ್ಟೇ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.
ಅಥಣಿ ಪಟ್ಟಣದ ತಮ್ಮ ನಿವಾಸದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪದೇ ಪದೇ ಸಿಎಂ ಬದಲಾವಣೆಯ ಮಾತುಗಳು ಕೇಳಿ ಬರುತ್ತಿವೆ. ಈ ರೀತಿ ಯಾಕೆ ಆಗುತ್ತಿದೆ ಎಂಬುದು ಗೊತ್ತಿಲ್ಲ. ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಓದಿ : ಸಚಿವ ಮುರುಗೇಶ್ ನಿರಾಣಿ ಸಿಡಿ ಬಾಬಾ: ಆಲಂ ಪಾಷಾ ಹೊಸ ಬಾಂಬ್!
ನನಗೆ ಬಂದಿರುವ ಮಾಹಿತಿ ಪ್ರಕಾರ, ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯುವಂತೆ ವರಿಷ್ಠರು ತಿಳಿಸಿದ್ದಾರೆ. ಹೀಗಿರುವಾಗ ಈ ಊಹಾಪೋಹದ ಸುದ್ದಿಗಳು ಯಾಕೆ? ಯಾವುದೇ ಕಾರಣಕ್ಕೂ ಸಿಎಂ ಬದಲಾಗಲ್ಲ ಎಂದು ಹೇಳಿದರು.
ಸಂಪುಟ ಪುನರ್ ರಚನೆ ಬಗ್ಗೆ ಗೊತ್ತಿಲ್ಲ:
ಸಚಿವ ಸಂಪುಟ ಪುನರ್ರಚನೆ ಬಗ್ಗೆ ಮಾತನಾಡಿದ ಅವರು, ನನಗೆ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನನಗೆ ಜವ್ದಬಾರಿ ಕೊಟ್ಟಿರುವ ಕೊಳಗೇರಿ ಅಭಿವೃದ್ದಿ ಮಂಡಳಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಸಿಎಂ ಕಡೆಯಿಂದ ಪ್ರಶಂಸೆಗೆ ಪಾತ್ರವಾಗಿದೆ. ಕೊಳಗೇರಿ ನಿಗಮದ ಅಧ್ಯಕ್ಷ ಸ್ಥಾನದಿಂದ ನನ್ನನ್ನು ಕೈ ಬಿಡುತ್ತಾರೆ ಎಂಬುದು ಕೂಡ ಊಹಾಪೋಹ ಎಂದು ಶಾಸಕ ಕುಮಟಳ್ಳಿ ಹೇಳಿದ್ರು.
ನಳಿನ್ ಕುಮಾರ ಕಟೀಲ್ ಅವರದ್ದು ಎನ್ನಲಾದ ವೈರಲ್ ಆಡಿಯೋದ ಬಗ್ಗೆ ಮಾತನಾಡಿ, ಅದು ಅವರ ಆಡಿಯೋ ಅಲ್ಲವೆಂದು ಸ್ವತಃ ನಳಿನ್ ಕುಮಾರ್ ಅವರೇ ಹೇಳಿದ್ದಾರೆ, ತನಿಖೆಗೂ ಆಗ್ರಹಿಸಿದ್ದಾರೆ ಎಂದು ಹೇಳಿದರು.