ಬೆಂಗಳೂರು: ಕಳೆದ ಸಲ ಒಂದು ಸಣ್ಣ ತಪ್ಪಿನಿಂದ ಪಾಲಿಕೆ(BBMP) ಅಧಿಕಾರ ಕೈತಪ್ಪಿತ್ತು. ಈ ಸಲ ಆ ತಪ್ಪು ನಡೆಯುವುದಿಲ್ಲ ಎಂದು ಸಚಿವ ಮುನಿರತ್ನ(minister Muniratna) ಹೇಳಿದ್ದಾರೆ.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮುಂಬರುವ ಬಿಬಿಎಂಪಿ ಚುನಾವಣೆ(BBMP election) ವಿಚಾರವಾಗಿ ಪ್ರತಿಕ್ರಿಯಿಸಿದರು. ಪಾಲಿಕೆ ಚುನಾವಣೆ ಮಾಡುವ ಬಗ್ಗೆ ನಮ್ಮ ವರಿಷ್ಠರು, ಅಧ್ಯಕ್ಷರು ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ಪಾಲಿಕೆ ಚುನಾವಣೆ ಮೂರು ನಾಲ್ಕು ತಿಂಗಳಲ್ಲಿ ನಡೆಯುತ್ತದೆ. ಸುಪ್ರೀಂಕೋರ್ಟಿನಲ್ಲಿ ಚುನಾವಣಾ ವ್ಯಾಜ್ಯ ಇತ್ಯರ್ಥ ಆಗಬೇಕಿದೆ. ಅದರ ಬಳಿಕ ಚುನಾವಣೆ 198 ಸ್ಥಾನಗಳಿಗೋ ಅಥವಾ 243 ಸ್ಥಾನಗಳಿಗೆ ಚುನಾವಣೆಯೋ ಅಂತ ನಿರ್ಧಾರ ಮಾಡಲಾಗುತ್ತದೆ. ಈ ಸಲ ಬಿಬಿಎಂಪಿಯಲ್ಲಿ ಖಂಡಿತವಾಗಿಯೂ ಬಿಜೆಪಿ ಅಧಿಕಾರ ಹಿಡಿಯಲಿದೆ. ಬಿಜೆಪಿಯಿಂದಲೇ ಮೇಯರ್(Mayor) ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಪಾಲಿಕೆ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿ ಚುನಾವಣೆ ಪಕ್ಷದ ನೇತೃತ್ವದಲ್ಲಿ ನಡೆಯುತ್ತದೆ, ಯಾವುದೇ ವ್ಯಕ್ತಿಯ ನೇತೃತ್ವದಲ್ಲಿ ನಡೆಯಲ್ಲ. ಪಕ್ಷದ ವತಿಯಿಂದ ಚುನಾವಣೆ ನಡೆಸಲು ನಮ್ಮ ವರಿಷ್ಠರು ಸೂಚನೆ ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ಉಸ್ತುವಾರಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬೆಂಗಳೂರು ಜಿಲ್ಲಾ ಉಸ್ತುವಾರಿ ಸಿಎಂ ಬಳಿಯೇ ಇರಲಿ ಎಂದು ಪುನರುಚ್ಚರಿಸಿದ ಮುನಿರತ್ನ, ಬೆಂಗಳೂರು ಬಗ್ಗೆ ಸಿಎಂ ಬಹಳ ಕಾಳಜಿ, ಆಸಕ್ತಿ ವಹಿಸುತ್ತಿದ್ದಾರೆ. ಮಳೆ ಸೇರಿದಂತೆ ಇತರೆ ಸಮಸ್ಯೆಗಳ ಬಗೆಹರಿಸಲು ಆಸಕ್ತಿ ತೋರುತ್ತಿದ್ದಾರೆ. ಸಿಎಂ ಬಳಿ ಬೆಂಗಳೂರು ಜಿಲ್ಲೆಯ ಉಸ್ತುವಾರಿ ಇದ್ದರೆ ಯಾರಿಗೂ ತೊಂದರೆ ಇಲ್ಲ. ಸಿಎಂ ಬಹಳ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಬೆಂಗಳೂರು ಉಸ್ತುವಾರಿ ಸಿಎಂ ಬಳಿ ಇದ್ದರೆ, ನಮ್ಮ ಅಭ್ಯಂತರ ಇಲ್ಲ. ಸಿಎಂ ಬಳಿಯೇ ಬೆಂಗಳೂರು ಉಸ್ತುವಾರಿ ಇರಲಿ ಎಂದರು.
ಪರಿಷತ್ ಚುನಾವಣೆ ಸಂಬಂಧ ಮಾತನಾಡಿದ ಮುನಿರತ್ನ, ವಿಧಾನಪರಿಷತ್ ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಎಲ್ಲ ಕಡೆಯೂ ಬಿಜೆಪಿಯಿಂದ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸ್ತಾರೆ. ಖಂಡಿತವಾಗಿಯೂ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂದೇಶ್ ನಾಗರಾಜ್ ಬಿಜೆಪಿ ಸೇರ್ಪಡೆ ಸಂಬಂಧ ಮಾತನಾಡಿದ ಸಚಿವ ಮುನಿರತ್ನ ಅವರು, ಸಂದೇಶ್ ನಾಗರಾಜ್ ಬಿಜೆಪಿಗೆ ಸೇರೋದಾಗಿ ಹೇಳಿಕೆ ಕೊಟ್ಟಿದ್ದಾರೆ. ಅವರು ಪಕ್ಷಕ್ಕೆ ಸೇರಿದ ಮೇಲೆ ಅವರ ಜತೆ ಚರ್ಚೆ ಮಾಡುತ್ತೇನೆ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರ ನಮ್ಮ ನಾಯಕರಿಗೆ ಸಂಬಂಧಿಸಿದ ವಿಷಯ. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಇದೇ ವೇಳೆ ತಿಳಿಸಿದರು.
'ಏಕ್ ಲವ್ ಯಾ'(ekloveya)ಚಿತ್ರ ತಂಡದಿಂದ ಪ್ರಮಾದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕನ್ನಡ ಚಿತ್ರಗಳ ಕುರಿತ ಸಣ್ಣಪುಟ್ಟ ವಿಚಾರಗಳನ್ನು ದೊಡ್ಡದಾಗಿ ಬಿಂಬಿಸುವುದು ಬೇಡ. ವೈಯಕ್ತಿಕವಾಗಿ ಯಾರೂ ಪುನೀತ್ ರಾಜ್ಕುಮಾರ್ ಬಗ್ಗೆ ತಪ್ಪಾಗಿ ಅರ್ಥೈಸೋ ಕೆಲಸ ಮಾಡಲು ಹೋಗುವುದಿಲ್ಲ. ಏನಾದರೂ ತಪ್ಪಾಗಿದ್ರೆ ಅದನ್ನು ಸರಿಪಡಿಸಿಕೊಳ್ಳುತ್ತಾರೆ. ಅದನ್ನೇ ದೊಡ್ಡದು ಮಾಡುವುದು ಬೇಡ ಎಂದು ಹೇಳಿದರು.
ಇದನ್ನೂ ಓದಿ:'ಅಪ್ಪು' ಸಾರ್ ಅಭಿಮಾನಿಗಳಿಗೆ ನೋವುಂಟಾಗಿದ್ದರೆ ಕ್ಷಮೆ ಇರಲಿ : ನಿರ್ದೇಶಕ ಜೋಗಿ ಪ್ರೇಮ್