ಕೆಆರ್‌ಪುರ : ನನ್ನ ನಿರೀಕ್ಷೆಗೆ ತಕ್ಕ ಸಚಿವ ಸ್ಥಾನ ಸಿಗಲಿಲ್ಲ. ಬಿಜೆಪಿ ನಾಯಕರು ಹೇಳಿದಷ್ಟು ಭರವಸೆಯನ್ನ ಈಡೇರಿಸಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ತಮ್ಮ ಮಗನ ಹುಟ್ಟುಹಬ್ಬದ ಪ್ರಯುಕ್ತ ಗರುಡಚಾರ್ ಪಾಳ್ಯದ ಬಡ ಜನರಿಗೆ ಬಿರಿಯಾನಿ ಮತ್ತು ಬೆಡ್‌ಶೀಟುಗಳನ್ನ ವಿತರಣೆ ಮಾಡಿ ಮಾತನಾಡಿದ ಅವರು, ಸಚಿವರಾದರೆ ಹೆಚ್ಚಿನ ಅವಕಾಶ ಸಿಗುತ್ತೆ, ರಾಜ್ಯದ ಜನತೆಗೆ ನನ್ನ ಕೈಲಾದ ಕೆಲಸ ಮಾಡಬಹುದು ಎಂದುಕೊಂಡು ನಾನು ಬಿಜೆಪಿಗೆ ಸೇರಿದೆ.
ಶ್ರೀಮಂಜುನಾಥ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ, ಯಾವ ಆಸೆ, ದುಡ್ಡು ತೆಗೆದುಕೊಂಡು ನಾನು ಪಕ್ಷಕ್ಕೆ ಸೇರಿಲ್ಲ. ಆದರೆ, ನಾನು ನಿರೀಕ್ಷೆ ಮಾಡಿದಷ್ಟು, ಅವರು ಭರವಸೆ ಕೊಟ್ಟಷ್ಟು, ನನಗೆ ಅವಕಾಶ ಸಿಗಲಿಲ್ಲ. ಇದರಿಂದ ನನ್ನ ಮನಸಿಗೆ ನೋವಿದೆ. ಇವತ್ತು ನನಗೆ ಕೊಟ್ಟಿರುವ ಖಾತೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ ಎಂದರು.
ಮುಂದಿನ ದಿನಗಳಲ್ಲಿ ನಮ್ಮ ಕುಟುಂಬದಿಂದ ಯಾರೇ ರಾಜಕಾರಣಕ್ಕೆ ಬರಲಿ, ಮೊದಲು ಶ್ರೀಮಂಜುನಾಥ ದೇವರ ಮೇಲೆ ಆಣೆ ಮಾಡಿ ರಾಜಕೀಯಕ್ಕೆ ಬರಬೇಕು.
ಬಡವರ ಸೇವೆ ಮಾಡುತ್ತೇನೆ, ನಾನು ಯಾವುದೇ ಹಣ, ಬೇರೆಯವರ ಆಸ್ತಿಗೆ ಆಸೆ ಪಡುವುದಿಲ್ಲ ಮತ್ತು ಸರ್ಕಾರ ಕೊಡುವ ಹಣವನ್ನ ಬಡವರ ಸೇವೆಗೆ ವಿನಿಯೋಗಿಸುತ್ತೇನೆ ಅಂತಾ ಆ ದೇವರ ಮೇಲೆ ಪ್ರಮಾಣ ಮಾಡಿ ರಾಜಕೀಯಕ್ಕೆ ಕಾಲಿಡಬೇಕು ಎಂದರು.
ದೇವರು ನಮಗೆ ಬೇಕಾದಷ್ಟು ಆಸ್ತಿ, ಸಂಪತ್ತು, ಐಶ್ವರ್ಯ ನೀಡಿದ್ದಾರೆ. ನಾನು 2004ರಿಂದ ವ್ಯಾಪರ ಮಾಡಿದ್ದರೆ ಮೂರು ಸಾವಿರ ಕೋಟಿಗಳಷ್ಟು ಆಸ್ತಿ ಮಾಡುತ್ತಿದ್ದೆ. ದೇವರು ನನಗೆ ಅಷ್ಟು ಶಕ್ತಿ, ಸಾಮರ್ಥ್ಯ ಕೊಟ್ಟಿದ್ದಾನೆ. ನಾನು ಮಾಡುವ ಕೆಲಸದಲ್ಲಿ ನ್ಯಾಯ, ಧರ್ಮ ಎಲ್ಲವೂ ಇದೆ ಎಂದರು.
ಇಂದು ನೂರಾರು ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲಿಕೆ ಮಾಜಿ ಸದಸ್ಯ ನಿತೀಶ್ ಪುರುಷೋತ್ತಮ್ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸಿದರು.
ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಮಾಜಿ ಪಾಲಿಕೆ ಸದಸ್ಯ ನಿತೀಶ್ ಪುರುಷೋತ್ತಮ್, ಬಡವರಿಗೆ ಬಿರಿಯಾನಿ ಮತ್ತು ಬೆಡ್‌ಶೀಟುಗಳನ್ನ ಹಂಚಿ ಕೆಲವರಿಗೆ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿದರು.