ಬೆಂಗಳೂರು : ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ ಕಾರವಾರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗಿದೆ. ಅಲ್ಲಿಯೇ 350 ಬೆಡ್ ವ್ಯವಸ್ಥೆ ಇದ್ದು, ಸದ್ಯಕ್ಕೆ ತುರ್ತಾಗಿ ಮಲ್ಟಿ ಸ್ಪೆಷಾಲಿಟಿ ಅಗತ್ಯ ಇರುವುದರಿಂದ ಅಲ್ಲಿಯೇ ಇನ್ನೂ 100 ಬೆಡ್ ಹೆಚ್ಚಿಸುವ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಆಗಬೇಕಾದ ಅಗತ್ಯತೆ ಹಿನ್ನೆಲೆಯಲ್ಲಿ ಈಗಾಗಲೇ ಮೆಡಿಕಲ್ ಕಾಲೇಜಿನಲ್ಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ಚಾಲನೆ ನೀಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ನಿರ್ಧಾರ ಮಾಡಿದ್ದೇವೆ. ಆಸ್ಪತ್ರೆ ಮಾಡುವ ವಿಚಾರವಾಗಿ ಮೊದಲ ಸಭೆ ಮಾಡಿದ್ದೇನೆ. ಜೊತೆಗೆ ನಮ್ಮ ಜನರು ಹೊನ್ನಾವರ, ಭಟ್ಕಳ, ಕುಮಟಾದಲ್ಲಿಯೂ ಆಗಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಎಲ್ಲ ಕಡೆ ಆಸ್ಪತ್ರೆ ಬೇಡ ಎಂದು ಹೇಳುವುದಿಲ್ಲ ಎಂದು ಮಂಕಾಳು ವೈದ್ಯ ಹೇಳಿದರು.
ಮೀನುಗಾರಿಕೆ ಮತ್ತು ಬಂದರು ಸಚಿವನಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲಾಖಾ ಪರಿಶೀಲನೆ ಮಾಡಿದ್ದು, ಕೆಲಸ ಪ್ರಾರಂಭ ಮಾಡಿದ್ದೇನೆ. ಎಲ್ಲೆಡೆ ಹೋಗಿ ಮೀನುಗಾರರ ಸಮಸ್ಯೆ ಆಲಿಸಿ, ಅದನ್ನು ಬಗೆಹರಿಸಲು ಪ್ರಯತ್ನ ಮಾಡುತ್ತೇನೆ. ಮೀನುಗಾರರಿಗೆ ಸಂಬಂಧಿಸಿದಂತೆ ಕೆಲವೊಂದು ಯೋಜನೆ ಬಾರದಿರುವುದು ನಿಜ. ಆದರೆ ರಾಜ್ಯದ ಎಲ್ಲ ಜಿಲ್ಲೆಯಲ್ಲೂ, ಅದರಲ್ಲೂ ವಿಶೇಷವಾಗಿ ಮೂರು ಜಿಲ್ಲೆಗಳಲ್ಲಿ ಮೀನುಗಾರರಿಗೆ ಯಾವುದೇ ಸಮಸ್ಯೆಗಳು ಆಗದಂತೆ ಸಂದರ್ಭಕ್ಕೆ ಅನುಗುಣವಾಗಿ ಯೋಜನೆಗಳನ್ನು ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಮಂಕಾಳು ವೈದ್ಯ ಭರವಸೆ ನೀಡಿದರು.
ಇದನ್ನೂ ಓದಿ : ಬಡತನದಿಂದ ಹೊಟೇಲ್ ಕೆಲಸಕ್ಕೆ ಸೇರಿದ್ದ ಮಂಕಾಳ ವೈದ್ಯ: ಸಮಾಜಸೇವೆಗೆ ಅರಸಿ ಬಂದ ಮಂತ್ರಿ ಪದವಿ..!
ಕರಾವಳಿ ಭಾಗದಲ್ಲಿ ಕಡಲ ಕೊರೆತ ಹೆಚ್ಚಾಗಿದೆ. ಮುಂಗಾರು ಸಂದರ್ಭದಲ್ಲಿ ಕಡಲ ಕೊರೆತ ಆಗದಂತೆ ಸಮಸ್ಯೆ ತೆಗೆದುಕೊಳ್ಳಲಾಗುವುದು. ಮೀನುಗಾರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಡಲ ಕೊರೆತ ಆಗದಂತೆ ಕ್ರಮ ವಹಿಸುತ್ತೇವೆ. 300 ಕಿ.ಮೀ ದೂರ ಕಡಲು ಇದೆ. ಎಲ್ಲಿ ಹೆಚ್ಚು ಕಡಲ ಕೊರೆತ ಇದೆ ಅದನ್ನ ಗುರುತಿಸುವ ಕೆಲಸ ಆಗಿದೆ. ಕಾರವಾರದಲ್ಲಿ, ಮಲ್ಪೆ, ಬಂದರು ಅಭಿವೃದ್ದಿ ಕಾರ್ಯ ಅರ್ಧಕ್ಕೆ ನಿಂತಿದೆ. ಅರ್ಧ ನಿಂತಿರುವ ಕಾಮಗಾರಿಯನ್ನಿ ಪೂರ್ಣ ಮಾಡುವ ಕೆಲಸವನ್ನು ಮೊದಲು ಮಾಡುತ್ತೇವೆ ಎಂದರು.
ಗ್ಯಾರಂಟಿಗಳಿಗೆ ಅನುದಾನ ಕೊರತೆ ವಿಚಾರವಾಗಿ ಮಾತನಾಡಿದ ಅವರು, ಅನುದಾನಕ್ಕೆ ಕೊರತೆ ಆಗಲ್ಲ ಎಂಬ ವಿಶ್ವಾಸ ನನಗಿದೆ. ಪೂರ್ಣ ಆಗುವ ಕೆಲಸ ಮಾತ್ರ ಮಾಡುತ್ತೇವೆ. ಐದು ಉಚಿತ ಯೋಜನೆ ಮೀನುಗಾರರಿಗೂ ಸಿಗಲಿದೆ. ಬಡವರಿಗೆ ತಲುಪಿಸುವ ಕೆಲಸ ಆಗಲಿದೆ. ಉಚಿತ ಯೋಜನೆಯಿಂದ ಅನುದಾನ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಇಲಾಖೆಗೂ ಹೇಳಿಲ್ಲ. ಯಾವುದೇ ರೀತಿಯಲ್ಲಿ ರಾಜ್ಯದ ಜನತೆಗೆ ಅಭಿವೃದ್ಧಿ ಆಗದೆ ಹೋಗಲ್ಲ. ಎಲ್ಲಾ ರೀತಿಯ ಅನುದಾನ ಸಿಗುವ ಮೂಲಕ ಅಭಿವೃದ್ಧಿ ಆಗಲಿದೆ. 500 ಕೋಟಿ ನಮ್ಮ ಇಲಾಖೆಗೆ ಅನುದಾನ ಬೇಕಿದೆ. ಹಾಗಾಗಿ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.
ಇದನ್ನೂ ಓದಿ : ಮೃತ ಮೀನುಗಾರರ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಿ: ಸಚಿವ ಮಂಕಾಳು ವೈದ್ಯ