ಬೆಂಗಳೂರು: ನಾನ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಮೌಖಿಕ ಪರೀಕ್ಷೆ ಇಲ್ಲದೆ ಮುಖ್ಯ ಪರೀಕ್ಷೆ ಅಂಕಗಳ ಆಧಾರದಲ್ಲಿಯೇ ನೇಮಕಾತಿ ಹಾಗೂ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ವ್ಯಕ್ತಿತ್ವ ಪರೀಕ್ಷೆ ಅಂಕಗಳನ್ನು 50 ರಿಂದ 25ಕ್ಕೆ ಕಡಿತಗೊಳಿಸುವ ಕುರಿತು ಕೆಪಿಎಸ್ಸಿ ನಿಯಮ 2021ಕ್ಕೆ ತಿದ್ದುಪಡಿ ತರಲು ಕರಡು ರಚಿಸಿ ಸಾರ್ವಜನಿಕರಿಂದ ಆಕ್ಷೇಪಣೆಗೆ ಅವಕಾಶ ಕಲ್ಪಿಸಿದ್ದು ಜನಾಭಿಪ್ರಾಯದಂತೆ ಮುನ್ನಡೆಯಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯ ರುದ್ರೇಗೌಡ ಈ ವಿಷಯ ಪ್ರಸ್ತಾಪಿಸಿ ಮಾತನಾಡಿದರು. ವ್ಯಕ್ತಿತ್ವ ಪರೀಕ್ಷೆ ಅಂಕ 50ರಿಂದ 25ಕ್ಕೆ ಇಳಿಕೆ ಮಾಡಲಾಗಿದೆ. ಆಡಳಿತ ಸುಧಾರಣೆ ಮಾಡಲು ಸರ್ಕಾರಕ್ಕೆ ಎಲ್ಲ ಅಧಿಕಾರವಿದೆ. ಆದರೆ ವ್ಯಕ್ತಿತ್ವ ಅಂಕಗಳು ಕಡಿಮೆಯಾದಾಗ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಅನ್ಯಾಯವಾಗಲಿದೆ ಎಂದರು.
ಹಿಂದೆ ಕೆಪಿಎಸ್ಸಿಗೆ 1800 ಅಂಕ ಇತ್ತು, 180-200 ಅಂಕ ಕೊಡುತ್ತಿದ್ದೆವು. ಈಗ ಅದು 1,250 ಆಗಿದೆ. ವ್ಯಕ್ತಿತ್ವ ಪರೀಕ್ಷೆಗೆ ಕೇವಲ 25 ಅಂಕ ಇದ್ದರೆ ನಗರ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆದರೆ ಗುಡ್ಡಗಾಡು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಬಗ್ಗೆಯೂ ಆಲೋಚಿಸಬೇಕು. ಹಾಗಾಗಿ ಇದನ್ನು ಮರುಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಲಕ್ಷ್ಮಣ ಸವದಿ, ಈ ಹಿಂದೆ ಮೋಟಾರ್ ವಹಿಕಲ್ ನೇಮಕಾತಿ ವೇಳೆ ಶೇ.90ರಷ್ಟು ಅಂಕ ಪಡೆದವರಿಗೆ ಹುದ್ದೆ ಸಿಕ್ಕಿಲ್ಲ. ಆದರೆ, ಶೇ.60ರಷ್ಟು ಅಂಕ ಪಡೆದವರಿಗೆ ಸಿಕ್ಕಿದೆ. ಕಾರಣ ಗ್ಯಾರೇಜ್ನಲ್ಲಿ ಒಂದು ವರ್ಷದ ಅನುಭವ ಪ್ರಮಾಣ ಪತ್ರ ಇರಬೇಕೆನ್ನುವ ನಿಯಮ ಎಂದರು. ನಂತರ ಮಾತು ಮುಂದುವರೆಸಿದ ರುದ್ರೇಗೌಡ, ಕೆಪಿಎಸ್ಸಿ ಎಂದರೆ ಅಕ್ರಮ ಎನ್ನುವಂತಾಗುದೆ. ನನ್ನ ಹೆಸರುಲ್ಲೂ ಅಕ್ರಮವೆಸಗಲಾಗಿತ್ತು, ಅದನ್ನು ನಂತರ ನಾನು ಎದುರಿಸಿದೆ ಎಂದರು.
ಕಾಂಗ್ರೆಸ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಕರ್ನಾಟಕ ನಾಗರಿಕ ಸೇವಾ ನಿಯಮ 2021ಕ್ಕೆ ತಿದ್ದುಪಡಿ ತರಲು ಕೆಪಿಎಸ್ಸಿ ಜತೆ ಸಮಾಲೋಚಿಸದೆ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಆಗಲಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಗ್ರೂಪ್ ಬಿ ಮತ್ತು ಸಿ ಕ್ಲಬ್ ಮಾಡುವ ನಿರ್ಧಾರ ಸರಿಯಲ್ಲ. ಮರು ಪರಿಶೀಲಿಸಬೇಕೆಂದು ಆಗ್ರಹಿಸಿದರು. ಇದೇ ವಿಷಯದ ಮೇಲೆ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿದರು.
ಇತ್ತ, ಸಭಾಪತಿ ಪೀಠದಲ್ಲಿದ್ದ ಭಾರತಿ ಶೆಟ್ಟಿ ಮಾತನಾಡಿ, ಕಾರ್ಯಾಂಗದ ನೇತೃತ್ವದ ವಹಿಸುವವರಿಗೆ ನಾಯಕತ್ವ ಗುಣ ಮುಖ್ಯ,ಹಾಗಾಗಿ ವ್ಯವಸ್ಥೆಯಲ್ಲಿ ಬದಲಾವಣೆ ತನ್ನಿ, ನೆಗಡಿ ಬಂದಿದೆ ಎಂದು ಮೂಗು ಕತ್ತರಿಸುವುದು ಬೇಡ. ವ್ಯಕ್ತಿತ್ವ ಪರೀಕ್ಷಾ ಅಂಕ ಕಡಿತ ಬೇಡ ಎಂದು ಸಲಹೆ ನೀಡಿದರು.
ಮಾಧುಸ್ವಾಮಿ ಉತ್ತರ: ಸುದೀರ್ಘ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಕೆಪಿಎಸ್ಸಿಗೆ ನೇಮಕಾತಿ ನಿಯಮದಲ್ಲಿ ಅವರೊಂದಿಗೆ ಸಮನ್ವಯತೆ ಕಡ್ಡಾಯವಲ್ಲ. ಮೊದಲು ವ್ಯಕ್ತಿತ್ವ ಪರೀಕ್ಷೆಗೆ 200 ಅಂಕ ಇಟ್ಟಿದ್ದೆವು, ಈಗ ಅದನ್ನು 50ಕ್ಕೆ ಇಳಿಸಲಾಗಿದೆ. ಗೆಜೆಟೆಡ್ ಪ್ರಬೇಷನರ್ಸ್ ಮೌಖಿಕ ಪರೀಕ್ಷೆ ಇರಲಿದೆ. ನಾನ್ ಗೆಜೆಟೆಡ್ ಗೆ ನೇರ ನೇಮಕಾತಿ ಮಾಡಬೇಕು. ಅವರಿಗೆ ಮೌಖಿಕ ಪರೀಕ್ಷೆ ಬೇಡ ಎನ್ನುವುದು ನಮ್ಮ ಉದ್ದೇಶ ಎಂದರು.
2011ರಲ್ಲಿ ಮೈತ್ರಿ ಎನ್ನುವ ಅಭ್ಯರ್ಥಿ ಮುಖ್ಯ ಪರೀಕ್ಷೆಯಲ್ಲಿ 1,037 ಅಂಕ ಗಳಿಸಿದರೂ ಹುದ್ದೆ ಸಿಗಲಿಲ್ಲ. 900 ಅಂಕ ಪಡೆದವರ ನೇಮಕಾತಿ ಆಗಿತ್ತು. ಶೇ.50 ರಷ್ಟು ಅಂಕ ಮೌಖಿಕದಲ್ಲಿ ವ್ಯತ್ಯಾಸ ಆಗಿತ್ತು ಎಂದು ಕೋರ್ಟ್ ಮೊರೆ ಹೋಗಿದ್ದರು. ಇದರಿಂದ ಇಡೀ ನೇಮಕಾತಿ ರದ್ದಾಯಿತು ಎಂದು ಅಂಕ ಕಡಿತ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಹಳ್ಳಿ ಮಕ್ಕಳಿಗೆ ಇಂಗ್ಲಿಷ್ ಕಷ್ಟ. ಆರಂಭದಿಂದಲೂ ಇಂಗ್ಲಿಷ್ ಕಲಿತರಲ್ಲ. ಆದರೂ, ಹಳ್ಳಿ ಹುಡುಗರು ಕಷ್ಟಪಟ್ಟು ಪರೀಕ್ಷೆ ಬರೆಯುತ್ತಾನೆ. ಆದರೆ, ಅದನ್ನು ಮಾತನಾಡಲು ಹೋದಾಗ ಅವರಿಗೆ ಕಷ್ಟವಾಗಲಿದೆ. ಈ ತೊಡಕನ್ನು ತೊಡೆದುಹಾಕಲು ವ್ಯಕ್ತಿತ್ವ ಪರೀಕ್ಷಾ ಅಂಕ ಕಡಿಮೆ ಮಾಡುತ್ತಿದ್ದೇವೆ. ಈ ಹಿಂದೆ 200 ಅಂಕ ಇಟ್ಟು 50ಕ್ಕೆ ಇಳಿಸಿದಾಗ ಸರ್ಕಾರದ ನಿರ್ಧಾರಕ್ಕೆ ಜನ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗ ಸಾರ್ವಜನಿಕ ಆಕ್ಷೇಪಣೆಗೆ ಅವಕಾಶ ಕೊಡಲಾಗಿದೆ. ಜನರು ಏನು ಹೇಳುತ್ತಾರೋ ನೋಡೋಣ, ನಾವು ನೋಟಿಫಿಕೇಷನ್ ಮಾತ್ರ ನಾಡಿದ್ದೇವೆ, ಕರಡು ಇನ್ನೂ ಅಂತಿಮ ಆಗಿಲ್ಲ ಎಂದರು.
ಇದನ್ನೂ ಓದಿ: ನಿಯಮ ಉಲ್ಲಂಘಿಸಿ ಭೂಮಿ ಮಂಜೂರು ಆರೋಪ.. ಮಾಜಿ ಸಿಎಂ ಬಿಎಸ್ವೈ ವಿರುದ್ಧ ಎಸಿಬಿಗೆ ದೂರು‘