ಶಿವಮೊಗ್ಗ: ಹನುಮ ಜಯಂತಿ ದಿನ ನಾಟಿ ಕೋಳಿ ತಿನ್ನುವವರನ್ನು ಜನ ತಿರಸ್ಕಾರ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಸಚಿವ ಈಶ್ವರಪ್ಪ ಶಿವಮೊಗ್ಗದಲ್ಲಿ ಟಾಂಗ್ ನೀಡಿದ್ದಾರೆ.
ನಮ್ಮದು ರಾಮಭಕ್ತರ ನಾಡು. ಈ ನಾಡಲ್ಲಿ ಹುಟ್ಟಿ ಹನುಮ ಜಯಂತಿ ದಿನವೂ ನಾಟಿ ಕೋಳಿ ತಿನ್ನುತ್ತೇನೆ ಎಂದು ಹೇಳಿದರೆ ಸರಿಯೇ?. ರಾಜ್ಯದ ಜನ ಅಂತಹವರನ್ನು ತಿರಸ್ಕಾರ ಮಾಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ನನ್ನ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ ಎಂದು ಮೊದಲು ಹೇಳಿದ್ದರು. ನಂತರ ನನ್ನ ಸೋಲಿಗೆ ಸ್ಥಳೀಯ ನಾಯಕರು ಕಾರಣ ಎಂದು ಹೇಳಿಕೆ ಬದಲಾಯಿಸಿದರು ಎಂದು ನುಡಿದರು.
ಜನ ನಮ್ಮನ್ನು ಯಾಕೆ ತಿರಸ್ಕಾರ ಮಾಡಿದ್ದಾರೆ ಎಂಬುದನ್ನು ತಿಳಿದುಕೊಂಡು ಜನರ ತೀರ್ಪಿಗೆ ತಲೆಬಾಗಬೇಕು. ಬಿಜೆಪಿಯವರು ನಮ್ಮ ಪಕ್ಷದವರನ್ನು ಕರೆದುಕೊಂಡು ಹೋಗ್ತಾರೆ ಅಂತ ಕಾಂಗ್ರೆಸ್ ನವರು ಹೇಳ್ತಾರೆ. ಹಾಗಾದ್ರೆ, ಅವರ ಪಕ್ಷದವರು ಅಷ್ಟೊಂದು ದುರ್ಬಲರೇ ಎಂದು ಪ್ರಶ್ನೆ ಮಾಡಿದರು. ಅಥವಾ ಅಪ್ಪ ಹಾಕಿದ ಆಲದ ಮರ ಅಂತ ಅದನ್ನೇ ಅವಲಂಬಿಸೋಕಾಗತ್ಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನಲ್ಲಿ ನಾಯಕತ್ವವಿಲ್ಲ. ಗಾಂಧೀಜಿ ಜೊತೆ ಅವರ ವಿಚಾರ ಸಹ ನಿಮ್ಮ ಪಕ್ಷದಲ್ಲಿ ಸತ್ತು ಹೋಗಿದೆ. ನೀವು ಗುಂಪು ಹಾಗೂ ಜಾತಿ ಬಿಟ್ಟು ಸಂಘಟನೆಯ ಮೂಲಕ ಚುನಾವಣೆ ಎದುರಿಸಿ. ಅದನ್ನು ಬಿಟ್ಟು ಸೋತು ನಮ್ಮ ಪಕ್ಷದವರನ್ನು ಬೈಯ್ಯಬೇಡಿ ಎಂದು ಸಿದ್ದುಗೆ ಸಲಹೆ ನೀಡಿದರು.
ಎಸ್ಡಿಪಿಐ ಬ್ಯಾನ್ ಆಗಬೇಕು:
ದೇಶದ್ರೋಹಿ ಘೋಷಣೆ ಹಾಕಿದ ಎಸ್ಡಿಪಿಐ ಸಂಘಟನೆಯನ್ನು ಬ್ಯಾನ್ ಮಾಡಬೇಕೆಂದು ಹೇಳುವವರಲ್ಲಿ ನಾನು ಮೊದಲಿಗ. ಅವರ ಮೇಲೆ ದೇಶದ್ರೋಹಿ ಕಾಯ್ದೆ ಹಾಕಲಾಗುವುದು. ಎಸ್ಡಿಪಿಐ ನ ನಾಲ್ವರು ಗೆದ್ದು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕ್ತಾ ಇದ್ದಾರೆ. ಹಿಂದೂಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕುವವರು ನಾಲ್ಕು ಸಾವಿರ ಜನ ಗೆದ್ದಿದ್ದಾರೆ. ಎಸ್ಡಿಪಿಐ ಪಕ್ಷ ಮಾಡಿದ್ದು ಸರಿಯಲ್ಲ ಅಂತ ಯಾವ ಕಾಂಗ್ರೆಸ್ ನಾಯಕರೂ ಹೇಳಿಲ್ಲ. ಸದ್ಯ ಎಸ್ಡಿಪಿಐ ನವರ ಕೃತ್ಯ ಸರಿ ಅಂತ ಹೇಳಿಲ್ಲವಲ್ಲ ಅಂತ ಸಂತೋಷ ಪಡಬೇಕಿದೆ ಎಂದರು.