ಬೆಂಗಳೂರು : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಮುಂದೂಡುವ ಪ್ರಶ್ನೆಯೇ ಇಲ್ಲ. ನಿಗದಿತ ಸಮಯಕ್ಕೆ ಚುನಾವಣೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿಷಯ ಪ್ರಸ್ತಾಪಿಸಿದ ವೇಳೆ ಮಧ್ಯ ಪ್ರವೇಶಿಸಿದ ಸಚಿವರು, ಎಂತಹ ಸಂದರ್ಭದಲ್ಲೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಮುಂದೂಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ.
ಈಗಾಗಲೇ ಅಧಿಕಾರದ ಅವಧಿ ಮುಗಿದಿದೆ. ಜಿಲ್ಲಾಧಿಕಾರಿಗಳು ಕ್ಷೇತ್ರ ಮರು ವಿಂಗಡಣೆ, ಮೀಸಲಾತಿ ಸೇರಿದಂತೆ ಮತ್ತಿತರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದರು. ಸರ್ಕಾರಕ್ಕೆ ಚುನಾವಣೆ ಮುಂದೂಡುವ ಇಚ್ಛೆಯೂ ಇಲ್ಲ. ನಾವು ಅಧಿಕಾರ ಅವಧಿ ಮುಗಿಯುತ್ತಿದ್ದಂತೆ ಚುನಾವಣೆ ನಡೆಸಲು ಸಿದ್ದರಾಗಿದ್ದೇವೆ.
ಈಗಾಗಲೇ ಆಯೋಗಕ್ಕೂ ಕೂಡ ಇದೇ ಅಭಿಪ್ರಾಯವನ್ನು ತಿಳಿಸಿದ್ದೇವೆ. ಬಹುತೇಕ ಎಲ್ಲ ಶಾಸಕರ ಅಭಿಪ್ರಾಯವೂ ಇದೇ ಆಗಿದೆ. ಮಾಜಿ ಸಚಿವ ಹೆಚ್ ಕೆ ಪಾಟೀಲ್ ಅವರು ಹೇಳುವಂತೆ ಚುನಾವಣೆಯನ್ನು ಸರ್ಕಾರ ಮುಂದೂಡುತ್ತದೆ ಎಂಬ ಭಾವನೆಯಲ್ಲಿ ಮಾತನಾಡಿದ್ದಾರೆ.
ಯಾವುದೇ ಕಾರಣಕ್ಕೂ ನಾವು ಮುಂದೂಡುವುದಿಲ್ಲ. ಚುನಾವಣಾ ಆಯೋಗ ಯಾವುದೇ ಕ್ಷಣದಲ್ಲಿ ಘೋಷಣೆ ಮಾಡಿದರೂ ತಮ್ಮದೇನು ಅಭ್ಯಂತರವಿಲ್ಲ ಎಂದು ಸ್ಪಷ್ಟನೆ ನೀಡಿದರು. ಪ್ರಸ್ತುತ ಮಾರ್ಗಸೂಚಿಯಲ್ಲಿ ಮಾತ್ರ ಗೊಂದಲ ಇರುವುದರಿಂದ ಇದನ್ನು ಸರಿಪಡಿಸಬೇಕೆಂಬುದು ನಮ್ಮ ನಿಲುವು.
ಜಿಪಂ, ತಾಪಂನ ಅನೇಕ ವ್ಯತ್ಯಾಸಗಳಾಗಿವೆ. ಕೆಲವು ಕಡೆ ಕಡಿಮೆಯಾದರೆ ಇನ್ನು ಕೆಲವು ಕಡೆ ಏರಿಕೆಯಾಗಿವೆ. ಒಂದು ಕ್ಷೇತ್ರಕ್ಕೆ ಜನಸಂಖ್ಯೆಯನ್ನು ಹೆಚ್ಚಳ ಮಾಡಿದ್ದರೆ, ಇನ್ನು ಕೆಲವು ಕ್ಷೇತ್ರಗಳಿಗೆ ಕಡಿಮೆ ಮಾಡಿದ್ದಾರೆ. ನಮ್ಮ ಕೋರಿಕೆ ಅಂದರೆ ಮಾರ್ಗಸೂಚಿಯಲ್ಲಿ ಉಂಟಾಗಿರುವ ಲೋಪದೋಷಗಳನ್ನು ಸರಿಪಡಿಸಿ ಚುನಾವಣೆ ಮಾಡಲಾಗುವುದು ಎಂದರು.
ಗುರುವಾರ ಸಭೆ : ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರ ಮರು ವಿಂಗಡಣೆಯಲ್ಲಿ ಉಂಟಾಗಿರುವ ಗೊಂದಲ ಪರಿಹರಿಸುವ ಕುರಿತಾಗಿ ಗುರುವಾರ ವಿರೋಧ ಪಕ್ಷಗಳ ನಾಯಕರ ಸಭೆ ಕರೆದು ಮಾರ್ಗಸೂಚಿ ಪರಿಷ್ಕರಿಸುವ ಕುರಿತಂತೆ ಚರ್ಚಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಹಾಲಿ ಇರುವ ಮಾರ್ಗಸೂಚಿಯಲ್ಲಿ ಅನೇಕ ಲೋಪ ದೋಷಗಳು ಉಂಟಾಗಿವೆ ಎಂದು ಶಾಸಕರು ಹೇಳಿದ್ದಾರೆ. ಮುಂದೆ ಇದು ಆಡಳಿತಾತ್ಮಕವಾಗಿ ತೊಂದರೆಯಾಗುವ ಸಾಧ್ಯತೆ ಇದೆ.
ಈಗಿರುವ ಮಾರ್ಗಸೂಚಿಯಲ್ಲಿ ಏನಾದರೂ ಲೋಪದೋಷಗಳು ಇದ್ದರೆ ಸರಿಪಡಿಸುವ ಸಂಬಂಧ ವಿರೋಧ ಪಕ್ಷದ ನಾಯಕರ ಸಭೆ ಕರೆಯಲಾಗುವುದು. ಈ ವಿಷಯದಲ್ಲಿ ಆಸಕ್ತಿ ಇರುವವರು ಭಾಗವಹಿಸಬಹುದು ಎಂದರು.
ಓದಿ: ವಿಷಯಗಳು ಹಳ್ಳಿಯ ವ್ಯಕ್ತಿಗೂ ತಲುಪಬೇಕಾದರೆ ಮಾಧ್ಯಮ ಅಗತ್ಯ: ಈಶ್ವರಪ್ಪ