ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಇಲಾಖೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಆರೋಪಿಸಿ ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯಪಾಲ ವಜುಭಾಯ್ ವಾಲಾ ಸೇರಿ ಬಿಜೆಪಿ ಹೈಕಮಾಂಡ್ಗೆ ಪತ್ರದ ಮೂಲಕ ದೂರು ನೀಡಿದ್ದಾರೆ. ಈ ಮೂಲಕ ಇಬ್ಬರ ನಡುವಿನ ಅಸಮಾಧಾನ ಬಹಿರಂಗವಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕೆ.ಎಸ್.ಈಶ್ವರಪ್ಪ, ಈ ಸಂಬಂಧ ರಾಜ್ಯಪಾಲ ವಜುಭಾಯ್ ವಾಲಾ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್,ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಪತ್ರ ಬರೆದು ದೂರು ನೀಡಿದ್ದಾರೆ.
ತಮ್ಮ ಇಲಾಖೆಗೆ ಬಿಡುಗಡೆಯಾದ 1,200 ಕೋಟಿ ರೂ.ಅನುದಾನ ಕುರಿತು ಹಸ್ತಕ್ಷೇಪ ಮಾಡುತ್ತಿದ್ದು, ಕೂಡಲೇ ಮಧ್ಯಪ್ರವೇಶ ಮಾಡಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಪಕ್ಷದ ನಾಯಕರಿಗೆ ಪತ್ರ ಬರೆಯುವುದು ವಾಡಿಕೆ. ಆದರೆ ಮಂತ್ರಿ ಮಂಡಲದ ಮುಖ್ಯಸ್ಥರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈಶ್ವರಪ್ಪ ಬರೆದ ಪತ್ರದಲ್ಲೇನಿದೆ?
ಒಟ್ಟು 780 ಕೋಟಿ ವೆಚ್ಚದ 20 ಸಾವಿರ ಕಿಲೋ ಮೀಟರ್ ಗ್ರಾಮೀಣ ರಸ್ತೆ ನಿರ್ಮಿಸುವ ಗ್ರಾಮೀಣ ಸುಮಾರ್ಗ ಯೋಜನೆಗೆ ಪದೇ ಪದೇ ಮನವಿ ಮಾಡುತ್ತಿದ್ದೇನೆ. ಆದರೆ ಆಡಳಿತಾತ್ಮಕ ಅನುಮೋದನೆ ಕೊಟ್ಟಿಲ್ಲ. ಸಿಎಂ ಯಡಿಯೂರಪ್ಪ 32 ಬಿಜೆಪಿ ಶಾಸಕರಿಗೆ ತಲಾ 20 ರಿಂದ 23 ಕೋಟಿ ರೂಪಾಯಿಗಳನ್ನು 42 ಬಿಜೆಪಿ ಶಾಸಕರಿಗೆ ತಲಾ 10 ಕೋಟಿ ರೂಪಾಯಿಗಳನ್ನು ಕಾಂಗ್ರೆಸ್‌ನ 30 ಮಂದಿ ಶಾಸಕರಿಗೆ 5 ಕೋಟಿ ರೂಪಾಯಿಗಳನ್ನು ಹಾಗೂ ಜೆಡಿಎಸ್‌ನ 18 ಮಂದಿ ಶಾಸಕರಿಗೆ ತಲಾ 5 ಕೋಟಿ ರೂಪಾಯಿ ನೀಡುವಂತೆ ಆದೇಶ ಹೊರಡಿಸಿದ್ದಾರೆ.
ಮೂಲಸೌಕರ್ಯ ಕಲ್ಪಿಸಲು ಯೋಜನೇತರ ವೆಚ್ಚವಾಗಿ ಈ ಹಣವನ್ನು ಮಂಜೂರು ಮಾಡಿದ್ದಾರೆ. ತಮ್ಮ ಇಲಾಖೆಗೆ ನೀಡಿದ ಅನುದಾನದಲ್ಲಿ ತಮ್ಮ ಗಮನಕ್ಕೆ ಬಾರದೇ ಅನುದಾನ ಹಂಚಿಕೆ ಮಾಡಿದ್ದಾರೆ. ಬೆಂಗಳೂರು ನಗರ ಜಿ.ಪಂ ಅಧ್ಯಕ್ಷ ಮರಿಸ್ವಾಮಿ, ಸಿಎಂ ಯಡಿಯೂರಪ್ಪರಿಗೆ ಬೀಗರೂ ಹೌದು. ಹಣಕಾಸು ಇಲಾಖೆಯ ಪತ್ರದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮರಿಸ್ವಾಮಿ ಪ್ರತಿನಿಧಿಸುವ ದಾಸರಹಳ್ಳಿ ಜಿಲ್ಲಾ ಪಂಚಾಯತ್‌ಗೆ 65 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಮರಿಸ್ವಾಮಿ, ಜೊತೆಗೆ ಅವರ ಸಂಬಂಧಿ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂಬ ಕಾರಣಕ್ಕೆ ಇಷ್ಟು ದೊಡ್ಡ ಪ್ರಮಾಣದ ಹಣ ಅನುದಾನದ ರೂಪದಲ್ಲಿ ಬಿಡುಗಡೆಯಾಗಿದೆ.
ಜಿ.ಪಂ.ಗಳಿಗೆ 2019-20 ರಲ್ಲೇ 1 ಅಥವಾ 2 ಕೋಟಿ ಅನುದಾನ ಬಿಡುಗಡೆಗೆಯಾಗಿತ್ತು. ಆದರೆ ಈಗ ರಾಜ್ಯದ ಯಾವುದೇ ಜಿಲ್ಲಾ ಪಂಚಾಯತ್‌ಗೂ ಬಿಡುಗಡೆಯಾಗದ ದೊಡ್ಡ ಪ್ರಮಾಣದ ಅನುದಾನದ ಕೇವಲ ಇದೊಂದೇ ಜಿಲ್ಲಾ ಪಂಚಾಯತ್‌ಗೆ ಬಿಡುಗಡೆಯಾಗಿದೆ. ಹೀಗೆ ಸಾಲು ಸಾಲು ವಿಚಾರಗಳಲ್ಲಿ ಸಿಎಂ ಯಡಿಯೂರಪ್ಪ ನಮ್ಮ ಇಲಾಖೆಯ ಕೆಲಸ ಕಾರ್ಯಗಳಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿ ಸಚಿವ ಕೆ.ಎಸ್. ಈಶ್ವರಪ್ಪ ಪತ್ರ ಬರೆದು ಹೈಕಮಾಂಡ್ ನಾಯಕರಿಗೆ ಸಿಎಂ ವಿರುದ್ಧ ದೂರು ನೀಡಿದ್ದಾರೆ. ಸದ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗುತ್ತಿದೆ, ಆಂತರಿಕ ಅಸಮಾಧಾನ ಇಲ್ಲ, ಯತ್ನಾಳ್ ವಿಷಯ ಹೊರತುಪಡಿಸಿದರೆ ಪಕ್ಷದಲ್ಲಿ ಇದ್ದ ಅಸಮಧಾನ ವಿಚಾರಗಳು ಸರಿಯಾಗಿವೆ ಎನ್ನುತ್ತಿರುವಂತೆ ಸಚಿವ ಈಶ್ವರಪ್ಪ ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶಾಸಕರು, ಸಣ್ಣಪುಟ್ಟ ನಾಯಕರು, ಬಂಡಾಯಗಾರರು ಅಸಮಾಧಾನದ ಹೇಳಿಕೆ, ಆರೋಪ ಮಾಡುವುದು ಸಾಮಾನ್ಯ. ಆದರೆ ಸಿಎಂ ಯಡಿಯೂರಪ್ಪ ತವರು ಜಿಲ್ಲೆಯ ಪ್ರಭಾವಿ ನಾಯಕ,ಸಂಪುಟ ಸಹೋದ್ಯೋಗಿ ಮತ್ತು ಆರ್ಎಸ್ಎಸ್ನ ಕಟ್ಟಾಳುವಾಗಿರುವ ಈಶ್ವರಪ್ಪ ಆರೋಪ ಮಾಡಿರುವುದರಿಂದ ಪ್ರಕರಣವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ.