ಬೆಂಗಳೂರು : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಸಚಿವ ಕೃಷ್ಣಬೈರೇಗೌಡ ಇಂದು ಬೆಳಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ತಂಗಿರುವ ಸಿಎಂರನ್ನು ಭೇಟಿ ಮಾಡಿದ ಕೃಷ್ಣಬೈರೇಗೌಡ ಅವರು ಚುನಾವಣೆ ಸಂಬಂಧ ಚರ್ಚೆ ನಡೆಸಿದರು. ಜೆಡಿಎಸ್ ಪಾಲಿನ ಕ್ಷೇತ್ರವನ್ನು ಕೊನೆಗಳಿಗೆಯಲ್ಲಿ ಕಾಂಗ್ರೆಸ್ಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ನಿಂದ ಕೃಷ್ಣಬೈರೇಗೌಡ ಉತ್ತರದಿಂದ ಸ್ಪರ್ಧಿಸುತ್ತಿದ್ದು, ಈ ಸಂಬಂಧ ಸಿಎಂ ಜೊತೆ ಸಮಾಲೋಚನೆ ನಡೆಸಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು ಎನ್ನಲಾಗಿದೆ.
ಬೆಂಗಳೂರು ಉತ್ತರದಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸ್ಪರ್ಧೆ ಮಾಡುತ್ತಾರೆ ಎಂತಲೇ ಸುದ್ದಿ ಹರಡಿತ್ತು. ಆದರೆ, ಗೌಡರು ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಘೋಷಣೆ ಮಾಡಿದರು. ಹಾಗಾಗಿ, ಉತ್ತರ ಕ್ಷೇತ್ರಕ್ಕೆ ಜೆಡಿಎಸ್ನಿಂದ ಸೂಕ್ತ ಅಭ್ಯರ್ಥಿ ಸಿಗದ ಕಾರಣ, ಉತ್ತರ ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲಾಯಿತು.
ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡ ನಂತರ ಇತ್ತೀಚೆಗಷ್ಟೇ ಎರಡೂ ಪಕ್ಷಗಳು ಲೋಕಸಭೆ ಸೀಟುಗಳನ್ನು ಹಂಚಿಕೆ ಮಾಡಿಕೊಂಡವು. ಕಾಂಗ್ರೆಸ್ಗೆ 20 ಕ್ಷೇತ್ರ ಮತ್ತು ಜೆಡಿಎಸ್ಗೆ 8 ಕ್ಷೇತ್ರಗಳು ಎಂದು ಎರಡೂ ಪಕ್ಷಗಳ ಮುಖಂಡರು ನಿರ್ಣಯಿಸಿದರು. ಆದರೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಯ ಕೊರತೆ ಉಂಟಾಗಿ ಕಾಂಗ್ರೆಸ್ಗೆ ಮತ್ತೊಂದು ಕ್ಷೇತ್ರವನ್ನು ಜೆಡಿಎಸ್ ಬಿಟ್ಟುಕೊಡುವಂತಾಯ್ತು.
ಒಂದು ಕ್ಷೇತ್ರ ಹೆಚ್ಚುವರಿಯಾಗಿ ಸಿಕ್ಕ ಬೆನ್ನಲ್ಲೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾಂಗ್ರೆಸ್ ಶಾಸಕರು ಸಭೆ ನಡೆಸಿದರು. ಸಿದ್ದರಾಮಯ್ಯ ಅವರ ನಿವಾಸದಲ್ಲಿ ರಾತ್ರಿ ನಡೆದ ಸಭೆಯಲ್ಲಿ ಸಚಿವ ಕೃಷ್ಣ ಭೈರೇಗೌಡ ಹೆಸರು ಅಂತಿಮವಾಗಿದೆ.ಕೃಷ್ಣ ಬೈರೇಗೌಡರು ಉತ್ತರದಲ್ಲಿ ಅಭ್ಯರ್ಥಿಯಾಗುವುದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ. ಇಂದು ಮಧ್ಯಾಹ್ನ ಕೃಷ್ಣಬೈರೇಗೌಡರು ನಾಮಪತ್ರ ಸಲ್ಲಿಸಲಿದ್ದಾರೆ.
ರಾಮನಗರಕ್ಕೆ ಹೊರಟ ಸಿಎಂ :
ಕೃಷ್ಣಬೈರೇಗೌಡ ಜೊತೆ ಮಾತುಕತೆ ನಂತರ ಹೋಟೆಕ್ ನಿಂದ ಸಿಎಂ ಕುಮಾರಸ್ವಾಮಿ ರಾಮನಗರಕ್ಕೆ ಹೊರಟರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿ.ಕೆ.ಸುರೇಶ್ ಇಂದು ನಾಮಪತ್ರ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಸಿಎಂ ಹಾಜರಿರುತ್ತಾರೆ. ಇದಕ್ಕೂ ಮುನ್ನ ನೆಲಮಂಗಲದ ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.