ಬೆಂಗಳೂರು: ಜನವರಿ 1ರಿಂದ ಕರಾವಳಿ ಜಿಲ್ಲೆಗಳಾದ ಉಡುಪಿ, ದ. ಕನ್ನಡ ಹಾಗೂ ಉ. ಕನ್ನಡದಲ್ಲಿ ಪಡಿತರ ಮೂಲಕ ಕುಚಲಕ್ಕಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾವು ಊಟ ಮಾಡುವ ಕುಚಲಕ್ಕಿಯನ್ನು ಪಡಿತರ ಮೂಲಕ ಕೊಡಬೇಕು ಎಂದು ಕರಾವಳಿ ಜಿಲ್ಲೆಗಳ ಜನರು ಬೇಡಿಕೆ ಇಟ್ಟಿದ್ದರು. ಬೇರೆ ಬೇರೆ ಕಾರಣಗಳಿಂದ ಅದರ ಜಾರಿ ಸಾಧ್ಯವಾಗಿರಲಿಲ್ಲ. ಅವರ ಬೇಡಿಕೆ ಗಮನಿಸಿ ಸಿಎಂ ಬಹುಜನರ, ಬಹು ದಿನಗಳ ಬೇಡಿಕೆಯಾದ ಊರಿನ ಕುಚಲಕ್ಕಿಯನ್ನು ನಾವು ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಆ ನಿಟ್ಟಿನಲ್ಲಿ ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು. ಖರೀದಿ ಮಾಡಿದ ಭತ್ತಕ್ಕೆ ಹೆಚ್ಚುವರಿ ಮೊತ್ತ ರಾಜ್ಯ ಸರ್ಕಾರ ಕೊಡಲು ಸರ್ಕಾರ ನಿರ್ಧರಿಸಿದೆ ಎಂದರು. ಈಗ ಕೇಂದ್ರ ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆಗೆ ಪ್ರತಿ ಕ್ವಿಂಟಾಲ್ಗೆ 2,040 ರೂ. ಕೊಡುತ್ತಿದೆ. ನಾವು ಕುಚಲಕ್ಕಿ ಮಾಡುವ ತಳಿಗಳಾದ ಜಯ, ಅಭಿಲಾಷ ಜ್ಯೋತಿ, ಎಂಒ 4ಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದೇವೆ.
13 ಲಕ್ಷ ಕ್ವಿಂಟಾಲ್ ಭತ್ತ ಖರೀದಿಯ ಗುರಿ ಇದೆ. ಈ ಪೈಕಿ 8.50 ಲಕ್ಷ ಕ್ವಿಂಟಾಲ್ ಭತ್ತ ಬರುವ ಅಂದಾಜಿದೆ. ಇದನ್ನು ವಿತರಣೆ ಮಾಡಲಾಗುವುದು. ನಾವು ಕೊಡುವ ಬೆಂಬಲ ಬೆಲೆಗೆ ಭತ್ತ ಸಿಗದ ಕಾರಣ ಸಿಎಂ ಪ್ರತಿ ಕ್ವಿಂಟಾಲ್ಗೆ 500 ರೂ. ಹೆಚ್ಚುವರಿ ಬೆಲೆ ಕೊಡುತ್ತಿದ್ದಾರೆ. ಇದನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಇದಕ್ಕೆ 132 ಕೋಟಿ ರೂ. ಆಗುವ ಅಂದಾಜಿದೆ ಎಂದರು.
ಕುಚಲಕ್ಕಿ ಪಡಿತರ ಮೂಲಕ ವಿತರಣೆ: ಈ ಹಿನ್ನೆಲೆ ಆಹಾರ ಇಲಾಖೆ ಹಾಗೂ ಕೃಷಿ ಇಲಾಖೆ ಜೊತೆಗೆ ಸಭೆ ಮಾಡಿದ್ದೇನೆ. ಡಿಸೆಂಬರ್ 1ರಿಂದ ಉಡುಪಿ, ದ.ಕನ್ನಡ ಮತ್ತು ಉ.ಕನ್ನಡದಲ್ಲಿ ಕುಚಲಕ್ಕಿ ಪೂರಕವಾಗಿ ಬೆಂಬಲ ಬೆಲೆ ನೀಡಿ ಭತ್ತ ಖರೀದಿ ಕೇಂದ್ರ ತೆರೆಯುತ್ತೇವೆ. ನಾವು 2,540 ಬೆಂಬಲ ಬೆಲೆ ನೀಡಿ ಖರೀದಿ ಮಾಡಿ ಭತ್ತವನ್ನು ನಮ್ಮ ಊರಲ್ಲೇ ಸಂಸ್ಕರಣೆ ಮಾಡುತ್ತೇವೆ. ಕೆಂಪು ಕುಚಲಕ್ಕಿಯ ಭತ್ತವನ್ನೇ ಖರೀದಿ ಮಾಡಲಾಗುವುದು. ಜನವರಿ 1ರಿಂದ ಕರಾವಳಿ ಮೂರು ಜಿಲ್ಲೆಗಳಿಗೆ ಕುಚಲಕ್ಕಿ ವಿತರಣೆ ಮಾಡಲಾಗುವುದು. ಐದು ಕೆಜಿ ಕುಚಲಕ್ಕಿ ಪಡಿತರ ಮೂಲಕ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.
ನಮ್ಮಲ್ಲಿರುವ ಕುಚಲಕ್ಕಿಯ ಭತ್ತ ವರ್ಷ ಪೂರ್ತಿ ಸಿಗುವುದು ಕಷ್ಟಸಾಧ್ಯವಾಗಲಿದೆ. ಹೀಗಾಗಿ ರಾಜ್ಯದ ಬೇರೆ ಜಿಲ್ಲೆಗಳಿಂದ ಭತ್ತ ಖರೀದಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ತಿಳಿಸಿದರು.
ಸಮವಸ್ತ್ರಕ್ಕೆ 182 ಕೋಟಿ ರೂ. ಅಗತ್ಯ ಇದೆ: ಆತ್ಮರಕ್ಷಣೆ ಕಲೆ ಸಂಬಂಧ ಸಮವಸ್ತ್ರ ಖರೀದಿಗೆ ಹೆಚ್ಚುವರಿ ಹಣದ ಅಗತ್ಯ ಇದೆ. ಈಗಾಗಲೇ ಕರಾಟೆ ಕಲಿಯುವ ವಿದ್ಯಾರ್ಥಿನಿಯರಿಗೆ ಸಮವಸ್ತ್ರಕ್ಕಾಗಿ 176 ಕೋಟಿ ರೂ. ಬಾಕಿ ಇತ್ತು. ಅದನ್ನು ಪಾವತಿ ಮಾಡಿದ್ದೇವೆ ಎಂದರು.
ಕ್ರೈಸ್ ಶಾಲೆಯಲ್ಲಿ ಓಬವ್ವ ಆತ್ಮರಕ್ಷಣೆ ಕಲೆ ಕಾರ್ಯಕ್ರಮ ಆರಂಭವಾಗಿದೆ. ಈ ವರ್ಷದಿಂದ ಆರನೇ ತರಗತಿಯ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸಲು ನಿರ್ಧರಿಸಿದ್ದೇವೆ. ಹೀಗಾಗಿ ಮಕ್ಕಳ ಸಮವಸ್ತ್ರಕ್ಕೆ ಹೆಚ್ಚುವರಿ 18 ಕೋಟಿಯ ಅಗತ್ಯ ಇದೆ ಎಂದರು.
ಓದಿ: ಅನ್ನಭಾಗ್ಯ ಅಕ್ಕಿ ಮಾರಾಟ ತಡೆಯದಿದ್ದರೆ ಹೋರಾಟ: ಬ್ರಿಜೇಶ್ ಕಾಳಪ್ಪ