ಬೆಂಗಳೂರು: 2013ರಿಂದ 2019ರವರೆಗೆ ಮೇಕೆದಾಟು ಯೋಜನೆ ಸಂಬಂಧ ಡಿಪಿಆರ್ ತಯಾರಿಸಿ ಸಲ್ಲಿಕೆ ಮಾಡಲು ಕಾಂಗ್ರೆಸ್ ಸರ್ಕಾರ ವಿಳಂಬ ಮಾಡಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ನ ಹೊಣೆಗೇಡಿತನದ ಸ್ಫೋಟಕ ಮಾಹಿತಿ ಬಹಿರಂಗ ಮಾಡುತ್ತೇನೆ ಎಂದಿದ್ದ ಕಾರಜೋಳ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮೇಕೆದಾಟು ಯೋಜನೆ ಅನುಷ್ಠಾನ ಸಂಬಂಧ ಕಾಂಗ್ರೆಸ್ನ ವಿಳಂಬ ನೀತಿಯ ಕೆಲ ದಾಖಲಾತಿಗಳನ್ನು ಬಿಡುಗಡೆ ಮಾಡಿದರು. ಆದರೆ, ಅವರು ನೀಡಿದ ದಾಖಲಾತಿಗಳಲ್ಲಿ ಸ್ಫೋಟಕ ಎನಿಸುವ ಯಾವುದೇ ಮಹತ್ವದ ಅಂಶಗಳು ಇರಲಿಲ್ಲ.
5-11-2013 ರಂದು 4ಜಿ ವಿನಾಯಿತಿ ಕೊಡಬೇಕೆಂದು ಕಾವೇರಿ ನೀರಾವರಿ ನಿಗಮದಿಂದ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. 7-4-2014 ಕ್ಕೆ ಸರ್ಕಾರ ಆ ಪ್ರಸ್ತಾವನೆ ತಿರಸ್ಕರಿಸಿ ಟೆಂಡರ್ ಕರೆಯಬೇಕು ಅಂತ ಸರ್ಕಾರ ಹೇಳುತ್ತದೆ. 2018ರ ಡಿಸೆಂಬರ್‌ನಲ್ಲಿ 4ಜಿ ವಿನಾಯಿತಿ ಕೊಡಿ ಅಂತ ಮತ್ತೆ ಕೇಳಲಾಗುತ್ತದೆ. 2019 ಜನವರಿಯಲ್ಲಿ 4ಜಿ ವಿನಾಯಿತಿಗೆ ಅನುಮತಿ ಕೊಡಲಾಗುತ್ತದೆ. ಇದು ಸಮ್ಮಿಶ್ರ ಸರ್ಕಾರದಲ್ಲಿ ಆಗಿದ್ದು, ಆಗ ಕುಮಾರಸ್ವಾಮಿ ಸಿಎಂ, ಡಿ. ಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವರು. 2013ರಿಂದ 2014ರವರೆಗೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯಾವುದೇ ಕೆಲಸ ಮಾಡಲಿಲ್ಲ. 2012 ರಿಂದ 18 ರವರೆಗೆ ಕಾಂಗ್ರೆಸ್ ಸರ್ಕಾರ ಇತ್ತು, ಅವರೇ ವಿಳಂಬದ ಜವಾಬ್ದಾರಿ ಹೊರಬೇಕು ಎಂದು ವಾಗ್ದಾಳಿ ನಡೆಸಿದರು.
4ಜಿ ವಿನಾಯಿತಿ ಕೊಡೋದಕ್ಕೆ ಐದು ವರ್ಷ ಬೇಕಾ?. ದಾಖಲೆ ಇಲ್ಲಿಯೇ ಇದೆ. ಟೆಂಡರ್ ಕರೆಯೋದಕ್ಕೆ ಐದು ವರ್ಷ ಬೇಕಾ?. ನೀವು ಡಿಪಿಆರ್ ರೆಡಿ ಮಾಡೋದಕ್ಕೆ ಐದು ವರ್ಷ ತೆಗೆದುಕೊಂಡಿದ್ದೀರಿ. ಡಿಪಿಆರ್ ರೆಡಿ ಮಾಡೋದಕ್ಕೆ ಐದು ವರ್ಷ ತೆಗೆದುಕೊಂಡ್ರಲ್ಲ ಯಾಕೆ?. ಡಿಪಿಆರ್ ಮಾಡೋದಕ್ಕೆ ಕುಮಾರಸ್ವಾಮಿಯವರೇ ಬರಬೇಕಾಯ್ತಲ್ಲ. ಈಗ ರಾಜಕೀಯ ಗಿಮಿಕ್ ಮಾಡೊದು ಬಿಟ್ಟು ಯಾಕೆ ಕಾಂಗ್ರೆಸ್ ಸರ್ಕಾರ ಇದ್ದಾಗ ಕಾಂಗ್ರೆಸ್ ವಿಳಂಬ ಮಾಡಿತ್ತು ಅಂತ ಉತ್ತರ ಕೊಡಲಿ. ಏನೂ ಮಾಡದೇ ಐದು ವರ್ಷ ಈಗ ಕಾವೇರಿಗಾಗಿ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಆದರೆ, ನಿಮ್ಮ ಅಧಿಕಾರವಧಿಯಲ್ಲಿ ಏನು ಸಾಧನೆ ಮಾಡಲಾಗಿದೆ ಎಂಬ ಪ್ರಶ್ನೆಗಳಿಗೆ ಉತ್ತರ ಕೊಡಲು ತಡಬಡಾಯಿಸಿದರು. ಪಾದಯಾತ್ರೆ ಹಂತ ಹಂತವಾಗಿ ದಾಖಲೆ ಬಿಡುಗಡೆ ಮಾಡ್ತೀನಿ. ಅವರು ಪಾದಯಾತ್ರೆ ಮಾಡಲಿ. ನಮ್ಮ ಸರ್ಕಾರ ಬಂದಾಗಿನಿಂದ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿವೆ. ಕಾಂಗ್ರೆಸ್ನ ವಿಳಂಬಕ್ಕೆ ಮಾತ್ರ ನಾನು ಇವತ್ತು ಉತ್ತರ ಕೊಡ್ತೇನೆ. ವಿಳಂಬಕ್ಕೆ ಏನು ಕಾರಣ ಅಂತ ನಾನು ಸಾಬೀತು ಮಾಡಿದ್ದೇನೆ ಎಂದರು.
ಇದನ್ನೂ ಓದಿ: ಬಿಜೆಪಿ ಪಂಜಾಬ್ ಸರ್ಕಾರದ ಮೇಲೆ ಗೂಬೆ ಕೂರಿಸೋಕೆ ಹೊರಟಿದೆ: ಖರ್ಗೆ