ಬೆಂಗಳೂರು: ಕಳೆದ ಎರಡು ದಿನಗಳಿಂದ ನಗರದ ವಿಕ್ಟೋರಿಯಾ ಮತ್ತು ರಾಜೀವ್ ಗಾಂಧಿ ಹೃದ್ರೋಗ ಆಸ್ಪತ್ರೆಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಸೋಂಕಿತರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು, ಇಂದು ಹಿರಿಯ ಅಧಿಕಾರಿಗಳು ಮತ್ತು ಕೋವಿಡ್ ಆಸ್ಪತ್ರೆ ನಿರ್ದೇಶಕರ ಜೊತೆ ವಿಡಿಯೋ ಸಂವಾದ ನಡೆಸಿದರು.
ಈ ವೇಳೆ ಆಹಾರ ಮತ್ತು ಸ್ವಚ್ಛತೆ ಸಂಬಂಧಿಸಿದಂತೆ ದೂರುಗಳು ಇಲ್ಲದಂತೆ ಕಾರ್ಯ ನಿರ್ವಹಿಸಲು ಸೂಚನೆ ನೀಡಿದರು. ಲೋಪಗಳಾಗಿವೆ ಎಂದು ದೂರು ಬಂದಲ್ಲಿ ನಿರ್ದೇಶಕರುಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ದೂರುಗಳ ಸಂಖ್ಯೆ ಹೆಚ್ಚಾದಲ್ಲಿ ಸಂಸ್ಥೆಗಳ ಆಡಳಿತ ನೋಡಿಕೊಳ್ಳಲು ಹಿರಿಯ ಕೆಎಎಸ್ ಅಧಿಕಾರಿಗಳನ್ನು ನೇಮಿಸಲಾಗುತ್ತೆ ಎಂದು ಖಡಕ್ ವಾರ್ನಿಂಗ್ ಕೂಡ ನೀಡಿದ್ದಾರೆ.
ವಿಕ್ಟೋರಿಯಾ, ರಾಜೀವ್ ಗಾಂಧಿ ಹೃದ್ರೋಗ ಆಸ್ಪತ್ರೆ ಮತ್ತು ಬೌರಿಂಗ್ ಆಸ್ಪತ್ರೆ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ತಜ್ಞ ಹಿರಿಯ ವೈದ್ಯರು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹೋಗುತ್ತಿಲ್ಲ ಎಂಬ ದೂರು ಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ರೋಗ ಲಕ್ಷಣಗಳಿಲ್ಲದ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗಳಿಗೆ ಸ್ಥಳಾಂತರಿಸಲು ಸೂಚಿಸಿದರು.
ಹಾಗೆ ತಮ್ಮ ತಂದೆ, ಪತ್ನಿ ಮತ್ತು ಪುತ್ರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಣಮುಖರಾಗಲಿ ಎಂದು ಹಾರೈಸಿರುವ ಎಲ್ಲರಿಗೂ ಚಿರಋಣಿ ಎಂದು ಸಚಿವರು ತಿಳಿಸಿದರು.