ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾ ನಗರದಲ್ಲಿರುವ ಕೆಇಎಸ್ ಇಂಜಿನಿಯರ್ಸ್ ಭವನದಲ್ಲಿ ಮಹಾಲಕ್ಷ್ಮಿ ಎಜುಕೇಷನಲ್ ಟ್ರಸ್ಟ್ ಆಯೋಜಿಸಿದ್ದ 'ವಿಶ್ವ ಮಹಿಳಾ ದಿನಾಚರಣೆ'ಕಾರ್ಯಕ್ರಮವನ್ನು ಅಬಕಾರಿ ಸಚಿವ ಕೆ ಗೋಪಾಲಯ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಸಚಿವ ಗೋಪಾಲಯ್ಯ, ಮಹಿಳೆಯರೂ ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದು, ಇಂದಿರಾ ಗಾಂಧಿ ನಮ್ಮ ದೇಶವನ್ನು ಆಳಿದರು. ಸುಷ್ಮಾ ಸ್ವರಾಜ್, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಕಿರಣ್ ಬೇಡಿ, ಐಶ್ವರ್ಯ ರೈ, ಸುಧಾ ಮೂರ್ತಿ,ಇನ್ನೂ ಮುಂತಾದ ಮಹಿಳೆಯರೂ ಈ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಅದ ಕೊಡುಗೆ ನೀಡಿದ್ದಾರೆ ಎಂದರು.
ಮಹಿಳೆಯರ ಸಬಲೀಕರಣಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಘೋಷಿಸಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಮಹಾಲಕ್ಷ್ಮಿ ಎಜುಕೇಷನಲ್ ಟ್ರಸ್ಟ್ ವತಿಯಿಂದ ಕ್ಷೇತ್ರಕ್ಕೆ ಮತ್ತು ಅಕ್ಕ ಪಕ್ಕದ ಕ್ಷೇತ್ರದವರಿಗೆ ಅನುಕೂಲವಾಗುವಂತೆ ಡಯಾಲಿಸಿಸ್ ಕೇಂದ್ರ ಸ್ಥಾಪಿಸಿದ್ದು, ನೂರಾರು ಫಲಾನುಭವಿಗಳು ಇದರ ಸದುಪಯೋಗ ಪಡೆದು ಕೊಳ್ಳುತಿದ್ದಾರೆ. ಮುಂದಿನ ದಿನಗಳಲ್ಲಿ ಕಿಡ್ನಿ ಸಮಸ್ಯೆ ಹೃದಯದ ಸಮಸ್ಯೆ ಇರುವಂಥ ಜನರಿಗೆ ಅನುಕೂಲವಾಗುವಂತೆ ಸೆಂಟರ್ ತೆರೆಯಲಾಗುವುದು. ನನ್ನ ಕ್ಷೇತ್ರದ ಮಹಿಳೆಯರಿಗೆ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸಿ ಕೊಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೇಮಲತಾ ಗೋಪಾಲಯ್ಯ, ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ನಾಗರತ್ನ ಲೋಕೇಶ್ ಉಪಾಧ್ಯಕ್ಷೆ ಪದ್ಮಾವತಿ ಶ್ರೀನಿವಾಸ್ ಸೇರಿದಂತೆ ನೂರಾರು ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.