ಬೆಂಗಳೂರು: ಕೊಚ್ಚಿನ್ನಲ್ಲಿರುವ ವಿಶೇಷ ಆರ್ಥಿಕ ವಲಯದ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿಸುವ ಕುರಿತು ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿಯನ್ನೂ ಮಾಡಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪಿ.ಆರ್. ರಮೇಶ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 36 ವಿಶೇಷ ಆರ್ಥಿಕ ವಲಯಗಳಿವೆ, ಇಲ್ಲಿಯವರೆಗೆ ಒಟ್ಟು 495 ರಫ್ತು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಿಂದ 3,74,728 ಜನರಿಗೆ ಉದ್ಯೋಗಾವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರದ ಕಾನೂನಿನ ರೀತಿ ವಿಶೇಷ ಆರ್ಥಿಕ ವಲಯಗಳು ರಚನೆಯಾಗಿವೆ. ಕಳೆದ ಬಾರಿ 1,01,103 ಕೋಟಿ ರಫ್ತಾಗಿದೆ ಎಂದರು.
ಕೊಚ್ಚಿಯಲ್ಲಿ ಎಸ್ಇಝೆಡ್ ಆಯುಕ್ತರಿದ್ದಾರೆ, ಎರಡು ಮೂರು ರಾಜ್ಯದ ವ್ಯಾಪ್ತಿಯ ಅಧಿಕಾರ ನೋಡಿಕೊಳ್ಳಲಿದ್ದಾರೆ. ವೈಟ್ ಫೀಲ್ಡ್ ನಲ್ಲಿ ಉಪ ಕಚೇರಿ ಇದೆ. ಇವರು ಕರ್ನಾಟಕದ ಜವಾಬ್ದಾರಿ ನೋಡಿಕೊಳ್ಳಲಿದ್ದಾರೆ. ಕೊಚ್ಚಿಯ ಕಚೇರಿ ಬೆಂಗಳೂರಿಗೆ ಸ್ಥಳಾಂತರ ಮಾಡಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಅಲ್ಲದೇ ಬಯೋಕಾನ್ ಮಾಲಿನ್ಯ ಪರಿಶೀಲನೆ, ಕ್ರಮದ ಭರವಸೆ ನೀಡಿದ ಸಚಿವರು, ಎಸ್ಇಝೆಡ್ ಗಳಿಂದ ರಫ್ತು ಹೆಚ್ಚಳ ಮಾಡುವಂತೆ ಸೂಚನೆ ಕೊಡಲಾಗುತ್ತದೆ ಎಂದರು.
ಬೀದರ್ ಸಕ್ಕರೆ ಕಾರ್ಖಾನೆ ಆರಂಭಿಸಲು ಚಿಂತನೆ: ಬೀದರ್ನಲ್ಲಿ ಸ್ಥಗಿತಗೊಂಡಿರುವ ಬೀದರ್ ಸಕ್ಕರೆ ಕಾರ್ಖಾನೆ ಪುನಾರಂಭ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಅರವಿಂದ ಕುಮಾರ ಅರಳಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೀದರ್ ನಲ್ಲಿ ಆರು ಕಾರ್ಖಾನೆಗಳಿದ್ದು, ಅದರಲ್ಲಿ ಎರಡು ದುರಸ್ತಿಯಲ್ಲಿವೆ. 50 ವರ್ಷದ ಕಾರ್ಖಾನೆ ಇದಾಗಿದ್ದು, 274.85 ಲಕ್ಷ ಸಾಲದಲ್ಲಿದೆ, ಯಂತ್ರೋಪಕರಣ ದುರಸ್ತಿಗೆ ಬಂದಿವೆ. ಹಾಗಾಗಿ ಖಾಸಗಿಯರಿಗೆ ಕಾರ್ಖಾನೆ ಹಸ್ತಾಂತರಿಸಿ ಪುನರ್ ಪ್ರಾರಂಭಿಸುವ ಕುರಿತು ಚಿಂತನೆ ನಡೆಸಲಾಗಿದೆ. ಮಹಾತ್ಮಗಾಂಧಿ ಸಹಕಾರ ಕಾರ್ಖಾನೆ ಉಳಿಸಿಕೊಂಡಂತೆ ಇದನ್ನು ಯಾಕೆ ಉಳಿಸಿಕೊಳ್ಳಬಾರದು ಎನ್ನುವ ಸಲಹೆ ಬಂದಿದೆ. ಈ ಬಗ್ಗೆಯೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಪುನರ್ ಪರಿಶೀಲಿಸುವ ಭರವಸೆಯನ್ನು ನೀಡಿದರು.
ಎಫ್ಐಡಿ ಹೂಡಿಕೆಯಲ್ಲಿ ಮೂರನೇ ಸ್ಥಾನ: ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಸತತವಾಗಿ ಎರಡು-ಮೂರನೇ ಸ್ಥಾನ ಕಾಯ್ದುಕೊಂಡು ಬರುತ್ತಿದೆ. ಇನ್ನು ಮುಂದೆಯೂ ಇದನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಕೈಗಾರಿಕಾ ಸ್ನೇಹಿ ರಾಜ್ಯವಾಗಿದೆ 2017-18 ರಲ್ಲಿ 55,334 ಕೋಟಿ, 2018-19 ರಲ್ಲಿ 46,963 ಕೋಟಿ 2019-20 ರಲ್ಲಿ 63,177 ಕೋಟಿ ಮತ್ತು 2020-21 ರಲ್ಲಿ 47,413 ಕೋಟಿ ಹಣ ಹರಿದುಬಂದಿದೆ. ಸತತವಾಗಿ ಎರಡು ಮೂರನೇ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. ಮಾರಿಷಸ್, ಸಿಂಗಪುರ್, ಜಪಾನ್ ಜರ್ಮನಿ, ಯುಎಸ್ಎ, ಯುಕೆ ನಿಂದ ಹೆಚ್ಚು ವಿದೇಶಿ ಬಂಡವಾಳ ಬರುತ್ತಿದೆ ಎಂದರು.
ಚೀನಾ ದೇಶದಿಂದ ಬಂಡವಾಳ ಹೂಡಿಕೆದಾರರು ಹೊರ ಬರುವಾಗ ನಮ‌್ಮ ರಾಜ್ಯದಲ್ಲಿಯೂ ವಿಶೇಷ ಪ್ರಯತ್ನ ಮಾಡಲಾಯಿತು. ಉದ್ಯಮಿಗಳನ್ನು ಸೆಳೆಯಲು ಕಾರ್ಯಪಡೆ ರಚಿಸಲಾಗಿತ್ತು. ವಿದೇಶಿ ಹೂಡಿಕೆ ಸೆಳೆಯಲು ಎಲ್ಲ ಪ್ರಯತ್ನ ನಡೆಸಲಾಗಿದೆ ಎಂದರು. ದೇಶಕ್ಕೆ 4 ಲಕ್ಷ ಕೋಟಿಯಷ್ಟು ವಿದೇಶ ಹೂಡಿಕೆ ಹರಿದು ಬಂದಾಗ 1.60 ಲಕ್ಷ ಕೋಟಿ ರಾಜ್ಯಕ್ಕೆ ಬಂದಿತ್ತು ಎನ್ನುವುದು ರಾಜ್ಯದ ಉದ್ಯಮ ಸ್ನೇಹಿ ವಾತಾವರಣಕ್ಕೆ ನಿದರ್ಶನ ಎಂದು ಸಚಿವರು ವಿವರಿಸಿದರು.