ಬೆಂಗಳೂರು: ಆಗಸ್ಟ್ 13 ರಿಂದ ಇಲ್ಲಿಯವರೆಗೆ ಕಾಡಾನೆಗಳ ದಾಳಿಯಿಂದ ಐವರು ಮೃತಪಟ್ಟಿರುವ ಬಗ್ಗೆ ಆಘಾತ ಮತ್ತು ಶೋಕ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಕಾಡಂಚಿನಲ್ಲಿರುವ ಜನರಿಗೆ ಈ ಸಂಬಂಧ ಹೆಚ್ಚಿನ ಜಾಗೃತಿ ಮೂಡಿಸಲು ಮತ್ತು ಮುನ್ನೆಚ್ಚರಿಕೆ ಕ್ರಮ ವಹಿಸಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ವಿಕಾಸ ಸೌಧದಲ್ಲಿ ಇಂದು ಸಭೆ ನಡೆಸಿದ ಸಚಿವರು, ಮಾನವ–ವನ್ಯ ಮೃಗಗಳ ಸಂಘರ್ಷ ಹೆಚ್ಚಳದ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಅಮೂಲ್ಯವಾದ ಮಾನವ ಪ್ರಾಣಹಾನಿ ಆಗಬಾರದು, ಇದೇ ವೇಳೆ ವನ್ಯ ಮೃಗಗಳು ಕೂಡ ಅಕ್ರಮ ವಿದ್ಯುತ್ ಬೇಲಿ ಸ್ಪರ್ಶದಿಂದ ಹಾಗೂ ಬೇಲಿಯಲ್ಲಿ ಹಾಕುವ ಉರುಳಿಗೆ ಸಿಲುಕಿ ಸಾವಿಗೀಡಾಗಬಾರದು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಿತ ಅರಣ್ಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಜನವಸತಿಗಳ ಬಳಿ, ರೈತರ ತೋಟ, ಗದ್ದೆಗಳ ಬಳಿ ಆನೆಗಳು ಕಾಣಿಸಿಕೊಂಡಾಗ ತ್ವರಿತವಾಗಿ ಆನೆಗಳನ್ನು ಕಾಡಿಗೆ ಮರಳಿಸಲು ಮತ್ತು ಸುತ್ತಮುತ್ತಲ ಜನರಿಗೆ ವಾಟ್ಸ್‌ಆ್ಯಪ್, ಎಸ್‌ಎಂಎಸ್ ಮತ್ತು ಸಾರ್ವಜನಿಕ ಪ್ರಚಾರ ವಿಧಾನಗಳ ಮೂಲಕ ಮಾಹಿತಿ ನೀಡಿ, ಜೀವಹಾನಿ ತಗ್ಗಿಸುವಂತೆ ಸಚಿವರು ನಿರ್ದೇಶಿಸಿದರು.
ಆನೆ ಕಾರ್ಯಪಡೆಯಲ್ಲಿನ ಗುಂಪು ಹೆಚ್ಚಳ: ಆನೆಗಳ ಹಾವಳಿ ಹೆಚ್ಚಾಗಿರುವ ಚಾಮರಾಜನಗರ, ಮತ್ತು ಕೊಡಗು ಭಾಗದಲ್ಲಿ ಕಾಡಾನೆಗಳನ್ನು ತಕ್ಷಣವೇ ಕಾಡಿಗೆ ಓಡಿಸಲು ಹಾಲಿ ಕಾರ್ಯ ನಿರ್ವಹಿಸುತ್ತಿರುವ ಆನೆ ಕ್ಷಿಪ್ರ ಕಾರ್ಯಪಡೆ ಗುಂಪುಗಳನ್ನು ಹೆಚ್ಚಿಸುವಂತೆ ಇದೇ ಸಂದರ್ಭದಲ್ಲಿ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು.
ರೇಡಿಯೋ ಕಾಲರ್: ಎಲ್ಲ ಆನೆಗಳೂ ನಾಡಿಗೆ ಬರುವುದಿಲ್ಲ. ಕೆಲವು ಆನೆಗಳು ಮಾತ್ರ ಪದೇ ಪದೆ ನಾಡಿಗೆ ಲಗ್ಗೆ ಇಟ್ಟು ಹಾನಿ ಮಾಡುತ್ತವೆ. ಇಂತಹ ಆನೆಗಳನ್ನು ಗುರುತಿಸಿ ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು. ಪ್ರಸ್ತುತ ರಾಜ್ಯದಲ್ಲಿ ಇಂತಹ 14 ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಇದರಿಂದ ಆನೆಗಳ ಚಲನವಲನದ ಬಗ್ಗೆ ಸಂಪೂರ್ಣ ಮಾಹಿತಿ ಲಭಿಸುತ್ತದೆ. ಅರಣ್ಯ ಇಲಾಖೆಯಲ್ಲಿ ಪ್ರಸ್ತುತ ಇನ್ನೂ 30 ರೇಡಿಯೋ ಕಾಲರ್ ಲಭ್ಯವಿದ್ದು, ಪುಂಡಾನೆಗಳನ್ನು ಸೆರೆ ಹಿಡಿದು ಕಾಡಿಗೆ ಬಿಡುವ ಮೊದಲು ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ. ಹಿಂದೆ ವಿಶ್ವ ವನ್ಯಜೀವಿ ನಿಧಿಗಾಗಿ ಕಾಯಲಾಗುತ್ತಿತ್ತು, ಈಗ ಇಲಾಖೆಯೇ ರೇಡಿಯೋ ಕಾಲರ್ ಖರೀದಿ ಮಾಡುತ್ತಿದೆ. ಪ್ರತಿ ರೇಡಿಯೋ ಕಾಲರ್ಗೆ ಸುಮಾರು 7 ಲಕ್ಷ ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ರೈಲ್ವೆ ಬ್ಯಾರಿಕೇಡ್: ಕಾಡಾನೆಗಳು ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಉತ್ತಮ ವಿಧಾನವಾಗಿದೆ. ಆನೆಗಳು ಹೆಚ್ಚಾಗಿ ನಾಡಿನತ್ತ ಬರುವ ಪ್ರದೇಶಗಳನ್ನು ಗುರುತಿಸಿ ಬ್ಯಾರಿಕೇಡ್ ಹಾಕುವ ಕಾರ್ಯ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇದನ್ನೂ ಓದಿ: ಕೊಡಗಲ್ಲಿ ನಿಲ್ಲದ ಕಾಡಾನೆ ದಾಳಿ: ನಿನ್ನೆ ಮತ್ತೆ ಕೂಲಿ ಕಾರ್ಮಿಕ ಮಹಿಳೆ ಬಲಿ.. ಜನರಿಂದ ದಿಕ್ಕಾರ