ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆ ಸುಪ್ರೀಂ ಕೋರ್ಟ್ ವಿರುದ್ಧವೋ ಅಥವಾ ಅವರು ನಾಯಕತ್ವಕ್ಕಾಗಿ ಹೋರಾಟ ಮಾಡುತ್ತಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ನವರು ಮೇಕೆದಾಟು ಯೋಜನೆ ಜಾರಿಗಾಗಿ ಎರಡನೇ ಹಂತದ ಪಾದಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು 2013-18 ರವರೆಗೆ ಅಧಿಕಾರದಲ್ಲಿದ್ದರು. 2012 ರಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಯಾತ್ರೆ ಮಾಡಿದ್ದರು. ಯುಕೆಪಿ ಯೋಜನೆಗಳಿಗೆ ಐದು ವರ್ಷದಲ್ಲಿ 7,599 ಕೋಟಿ ರೂ. ಖರ್ಚು ಮಾಡಿದ್ದಾರೆ. ಕೃಷ್ಣಾ ನ್ಯಾಯಾಧಿಕರಣದ ವ್ಯಾಜ್ಯ ನಿವಾರಣೆಗೆ 2,300 ಕೋಟಿ ಮಾತ್ರ ಖರ್ಚು ಮಾಡಿದ್ದಾರೆ ಎಂದು ಟೀಕಿಸಿದರು.
ಮೇಕೆದಾಟು ಪಾದಯಾತ್ರೆ ಸರ್ವೋಚ್ಚ ನ್ಯಾಯಾಲಯದ ವಿರುದ್ಧವೋ ಅಥವಾ ನಾಯಕತ್ವಕ್ಕಾಗಿ ಹೋರಾಟವೋ ಎನ್ನುವುದನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಅವರು ಸ್ಪಷ್ಟನೆ ನೀಡಬೇಕು. ನಾವು ಅಧಿಕಾರಕ್ಕೆ ಬಂದ ಮೇಲೆ ಕೃಷ್ಣಾ ಕೊಳ್ಳದಿಂದ ಮುಳುಗಡೆಯಾಗುವ 20 ಹಳ್ಳಿಗಳ ಸ್ಥಳಾಂತರಕ್ಕೆ ತೀರ್ಮಾನ ಮಾಡಿ 17,200 ಕೋಟಿ ರೂ. ಮೀಸಲಿಟ್ಟಿದ್ದೇವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನೂ ಮಾಡದೇ ಇದ್ದುದರಿಂದ ಈಗ ಕೃಷ್ಣಾ ಯೋಜನೆಗಳ ವೆಚ್ಚ 70 ಸಾವಿರ ಕೋಟಿಗೆ ಏರಿದೆ ಎಂದು ತಿಳಿಸಿದರು.
2013 ರಲ್ಲಿ ಕೃಷ್ಣಾ ಕೊಳ್ಳದ ಜನರಿಗೆ ಮೋಸ ಮಾಡಿದ್ದೀರಿ. ಈಗ ಕಾವೇರಿ ಕೊಳ್ಳದ ಜನರಿಗೂ ಮೋಸ ಮಾಡಲು ಹೊರಟಿದ್ದೀರಿ. ರಾಜಕೀಯ ಬಿಡಿ, ವೋಟ್ ಬ್ಯಾಂಕ್ ರಾಜಕಾರಣ ಮಾಡುವುದನ್ನು ನಿಲ್ಲಿಸಿ. ನೀವು ಮಾಡುವ ಗಿಮಿಕ್ನಿಂದ ಜನರು ನಿಮ್ಮನ್ನು ಇನ್ನಷ್ಟು ದೂರ ತಳ್ಳುತ್ತಾರೆ. ದೇಶದಲ್ಲಿ ಕಾಂಗ್ರೆಸ್ ಬ್ರಿಟಿಷರಿಗಿಂತ ಕೆಟ್ಟ ಆಡಳಿತ ನೀಡಿದೆ ಎಂದು ಆರೋಪಿಸಿದರು.
ಫೆ .11 ರಂದು ಮೇಕೆದಾಟು ಪ್ರಕರಣದ ಕುರಿತು ಚರ್ಚೆ ನಡೆದಿದೆ. ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಆದಷ್ಟು ಬೇಗ ಒಪ್ಪಿಗೆ ನೀಡುವಂತೆ ಆಗ್ರಹಿಸಿದ್ದಾರೆ. ನಮ್ಮ ಸರ್ಕಾರ ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡಲಿದೆ. ಇನ್ನೆರಡು ದಿನದಲ್ಲಿ ಬಜೆಟ್ ಘೋಷಣೆ ಇದೆ. ಈಗ ಯಾವುದನ್ನೂ ಹೇಳುವುದಿಲ್ಲ. ಬಜೆಟ್ನಲ್ಲಿ ಮೇಕೆದಾಟು ಸೇರಿ ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಲಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದ ನೀರಾವರಿಗೆ ಒಂದು ಲಕ್ಷ ಕೋಟಿ ರೂ. ಖರ್ಚು ಮಾಡುವುದಾಗಿ ಹೇಳಿದ್ದೆವು. ಅದರೆ ಕೊರೊನಾ ನಮಗೆ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲು ಅವಕಾಶ ನೀಡಲಿಲ್ಲ. ನದಿ ಜೋಡಣೆ ಯೋಜನೆಗೆ ನಮ್ಮ ಸರ್ಕಾರ ವಿರೋಧ ವ್ಯಕ್ತಪಡಿಸಿದೆ ಎಂದರು.
ಕಾವೇರಿ-ಪೆನ್ನಾರ್ ನದಿ ಜೋಡಣೆ ಸಂಬಂಧ ಫೆಬ್ರವರಿ 11 ರಂದು ಸಭೆ ಇತ್ತು. ಅಲ್ಲಿ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ರಾಜ್ಯದ ಪಾಲಿನ ನೀರು ನಿಗದಿಯಾಗಬೇಕು. ಅಲ್ಲಿಯವರೆಗೆ ನದಿ ಜೋಡಣೆಯ ಡಿಪಿಆರ್ ಒಪ್ಪಿಗೆ ಕೊಡುವುದಿಲ್ಲ ಎಂದು ಸ್ಪಷ್ಪಡಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಾಳಿನ ಪಾದಯಾತ್ರೆಯಲ್ಲಿ ಸರ್ವರಿಗೂ ಹೆಜ್ಜೆ ಹಾಕುವ ಅವಕಾಶ: ಡಿಕೆಶಿ