ಬೆಂಗಳೂರು: ಎಲ್ಲರಿಗೂ ಕೋವಿಡ್ ಲಸಿಕೆ ಉಚಿತವಾಗಿ ನೀಡುವಂತೆ ಸಚಿವ ಸಂಪುಟ ಸಭೆಯಲ್ಲಿ ಸಚಿವ ಗೋಪಾಲಯ್ಯ ಮನವಿ ಮಾಡಿದರು. ಆದರೆ, ಸಚಿವ ಸಂಪುಟ ಸಭೆ ಎಲ್ಲರಿಗೂ ಉಚಿತ ಲಸಿಕೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಬಗ್ಗೆ ಒಲವು ತೋರಲಿಲ್ಲ.
ಖಾಸಗಿ ಆಸ್ಪತ್ರೆಗಳ ಲಸಿಕೆ ದರ ವಿಚಾರವಾಗಿ ಮಾತನಾಡಿದ ಅವರು, ಈ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ದುಬಾರಿ ಬೆಲೆಗೆ ನೀಡಲಾಗುತ್ತಿದೆ. ಬಡ ಜನರಿಗೆ ಇದರಿಂದ ಲಸಿಕೆ ಸಿಗುತ್ತಿಲ್ಲ ಅಂತ ನಮಗೆ ಬೈಯುವ ಸ್ಥಿತಿ ಬಂದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ಲಸಿಕೆ ಪೂರ್ಣ ಪ್ರಮಾಣದಲ್ಲಿ ಸರ್ಕಾರ ಉಚಿತವಾಗಿ ನೀಡಲಿ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಮಾರಾಟ ಬೇಡ. ಇದಕ್ಕಾಗಿ ಸುಮಾರು 3 ಸಾವಿರ ಕೋಟಿ ರೂ. ಹೊರೆ ಬೀಳಬಹುದು. ಕೆಲ ಅಭಿವೃದ್ಧಿ ಕೆಲಸವನ್ನು ಸ್ಥಗಿತಗೊಳಿಸಿ ಉಚಿತ ಲಸಿಕೆಗೆ ಹಣ ವಿನಿಯೋಗಿಸಬೇಕು ಎಂದು ಸಚಿವ ಗೋಪಾಲಯ್ಯ ಮನವಿ ಮಾಡಿದರು.
ಇದನ್ನೂ ಓದಿ: Yaas ಎಫೆಕ್ಟ್: ಕಂಚಿ ನದಿಗೆ ನಿರ್ಮಿಸಲಾಗಿದ್ದ ಸೇತುವೆ ಕುಸಿತ... VIDEO
ಆದರೆ ಸಚಿವ ಸಂಪುಟ ಸಭೆಯಲ್ಲಿ ಸಚಿವ ಗೋಪಾಲಯ್ಯ ಪ್ರಸ್ತಾಪಕ್ಕೆ ಇತರೆ ಸಚಿವರು ಯಾರೂ ಸಾಥ್ ನೀಡಿಲ್ಲ. ಕೆಲ ಸಚಿವರು ಈಗಾಗಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ ಎಂದು ವಾದಿಸಿ, ವಿಷಯಾಂತರ ಗೊಳಿಸಿದರು. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದೇ ಚರ್ಚೆ ಅಂತ್ಯಗೊಂಡಿತು.