ಬೆಂಗಳೂರು: ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೊರೊನಾದಿಂದ ಮರಣ ಹೊಂದುತ್ತಿರುವ ಪ್ರಮಾಣ ಶೇ. 5-8ರಷ್ಟಿದೆ. ಭಾರತದಲ್ಲಿ ಅದು ಶೇ. 2.8ರಿಂದ 3ರಷ್ಟು ಮಾತ್ರ ಇದೆ. ಅದು ಕರ್ನಾಟಕದಲ್ಲಿ ಶೇ. 1.6ರಷ್ಟು ಮಾತ್ರ ಇದ್ದು, ಕೊರೊನಾ ನಿಯಂತ್ರಣದಲ್ಲಿ ಸಫಲರಾಗುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದರು.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಆತ್ಮ ನಿರ್ಭರ ಭಾರತ ಯೋಜನೆಯ ವಿವಿಧ ಫಲಾನುಭವಿಗಳ ವರ್ಚುವಲ್ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಸಚಿವರು, ಕೊರೊನಾ ಕಾಲಿಟ್ಟಾಗ ಕೇವಲ ಎರಡು ಲ್ಯಾಬ್ಗಳಿಂದ ಆರಂಭಗೊಂಡ ನಮ್ಮ ತಯಾರಿ, ಇದೀಗ 80 ಲ್ಯಾಬ್ಗೆ ತಲುಪಿದೆ. ಇದಕ್ಕೆ ಪ್ರಧಾನಿ ಮೋದಿ ಸರ್ಕಾರ ಕಾರಣ. ಐಸಿಎಂಆರ್ಗೆ ತಾಂತ್ರಿಕ ಸಲಹೆ, ಅನೇಕ ರೀತಿಯ ಸಹಕಾರ ನೀಡಿದರು. ಅದಕ್ಕೆ ನಾವು ಇಂದು ಈ ಸಾಧನೆ ಮಾಡಿದ್ದೇವೆ. ಪ್ರತಿದಿನ 15-20 ಸಾವಿರ ಸ್ಯಾಂಪಲ್ ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿದ್ದೇವೆ ಎಂದರು.
ಕೊರೊನಾ ಬಂದ ಸಂದರ್ಭದಲ್ಲಿ ನಮಗೆ ಪಿಪಿಇ ಕಿಟ್ ಅಂದರೆ ಗೊತ್ತಿರಲಿಲ್ಲ. ಚೀನಾ, ಯೂರೋಪ್, ಅಮೆರಿಕದಿಂದ ತರಿಸಿಕೊಳ್ಳಬೇಕಿತ್ತು. ಸಾವಿರಾರು ಗಾರ್ಮೆಂಟ್ಸ್ ಇದ್ದರೂ ಕಿಟ್ ಉತ್ಪಾದನೆ ಮಾಡುತ್ತಿರಲಿಲ್ಲ. ಆದರೆ ಮೂರೇ ತಿಂಗಳಲ್ಲಿ ನಾವು ಲಕ್ಷಾಂತರ ಕಿಟ್ ತಯಾರಿಸುವ ಶಕ್ತಿ ಪಡೆದಿದ್ದೇವೆ. ನಮ್ಮಲ್ಲಿ ಈಗ ಪಿಪಿಇ ಕಿಟ್ ಕೊರತೆ ಇಲ್ಲ. ಈಗ ನಾವು ಬೇರೆ ದೇಶಕ್ಕೂ ರಫ್ತು ಮಾಡುತ್ತಿದ್ದೇವೆ ಎಂದರು.
ಸೂಕ್ಷ್ಮ, ಸಣ್ಣ, ಮಧ್ಯಮ ವರ್ಗದ ಕೈಗಾರಿಕೆಗಳು ನಮ್ಮ ದೇಶದ ಆಧಾರ ಸ್ಥಂಭಗಳು. 11 ಕೋಟಿ ಜನರು ಈ ವಲಯದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ರಾಜ್ಯದಲ್ಲಿಯೂ ಎಂಟು ಲಕ್ಷ ಗುಡಿ ಕೈಗಾರಿಕೆ, ಸಣ್ಣ, ಮಧ್ಯಮ ಕೈಗಾರಿಕೆಗಳಲ್ಲಿ 40-50 ಲಕ್ಷ ಜನ ಉದ್ಯೋಗ ಮಾಡುತ್ತಿದ್ದಾರೆ. ಹಾಗಾಗಿ ರಾಜ್ಯದ ಬೆನ್ನೆಲುಬು ಕೂಡ ಎಂಎಸ್ಎಂಇ ಆಗಿದೆ. ಆದರೆ ಕೊರೊನಾ ಕಾರಣದಿಂದ ಈ ವಲಯಕ್ಕೂ ಆರ್ಥಿಕ ಸಂಕಷ್ಟ ಎದುರಾಗಿದೆ. ಮೂರು ತಿಂಗಳು ವೇತನ ಕೊಡಲು ಆಗಿಲ್ಲ. ಸಾಲ ಮಾಡಿದ್ದೀರಿ. ಇಎಂಐ ಕಟ್ಟಬೇಕು, ವೇತನ ಕೊಡಲು ಸಾಧ್ಯವಾಗವರು ಇಎಂಐ ಹೇಗೆ ಕಟ್ಟುತ್ತಾರೆ. ಹಾಗಾಗಿ ಕೇಂದ್ರ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಕೃಷಿ, ಕೈಗಾರಿಕೆಯಿಂದ ಹಿಡಿದು ಅನೇಕ ವಲಯಕ್ಕೆ ಅನುದಾನ ಬಿಡುಗಡೆ ಮಾಡಿರುವುದು ಅನುಕರಣೀಯ ಎಂದು ಕೇಂದ್ರ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.
ಎಂಎಸ್ಎಂಇಗಳು ಈಗ ಕಾರ್ಯಾರಂಭ ಮಾಡಿವೆ. ಆದರೆ ಕೇವಲ ಉತ್ಪಾದನೆ ಮಾಡಿದರೆ ಸಾಲದು, ನಿಮ್ಮ ಉತ್ಪನ್ನಗಳನ್ನು ದೇಶ-ವಿದೇಶಕ್ಕೆ ರಪ್ತು ಮಾಡಿ. ರಫ್ತು ಮಾಡಿದರೆ ತೆರಿಗೆ ಉಳಿತಾಯವಾಗಲಿದೆ. ಹೊರ ದೇಶದ ಕರೆನ್ಸಿ ತರುವ ಶಕ್ತಿ ಬರಲಿದೆ. ಹೊರ ದೇಶದ ಕರೆನ್ಸಿ ನಮಗೆ ಹೆಚ್ಚಾಗಿ ಹರಿದು ಬರಲಿದೆ. ಹಾಗಾಗಿ ಕೈಗಾರಿಕೆಗಳ ಉತ್ತೇಜನ ಬಹಳ ಮುಖ್ಯ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡಲಿದೆ. ಮೋದಿ ಸರ್ಕಾರ ಕೂಡ ಈ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು.
ಮುಂದುವರೆದಿರುವ ದೇಶಗಳಲ್ಲಿ ಇಂದು ವೆಂಟಿಲೇಟರ್ ಸಿಗುತ್ತಿಲ್ಲ. ಆದರೆ ನಮ್ಮ ದೇಶದಲ್ಲಿ ಕೇವಲ ಒಂದು ಲಕ್ಷ ರೂಪಾಯಿಗೆ ವೆಂಟಿಲೇಟರ್ ಸಿದ್ಧಪಡಿಸುವಂತಾಗಿದೆ. ದೇಶದಲ್ಲಿ ಯುವಕರು, ಜ್ಞಾನ, ಜಾಣ್ಮೆಯ ಕೊರತೆಯಿಲ್ಲ. ಆದರೆ ಆತ್ಮವಿಶ್ವಾಸದ ಕೊರತೆ ಇದೆ. ಅದನ್ನು ತುಂಬುವ ಕೆಲಸವಾಗಬೇಕು. ನಾಸಾದಲ್ಲಿ ಶೇ. 40ರಿಂದ 50ರಷ್ಟು ವಿಜ್ಞಾನಿಗಳು ಭಾರತದವರು. ವಿಶ್ವದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಶ್ರೇಷ್ಠ ಶಸ್ತ್ರಚಿಕಿತ್ಸಕರು, ಸರ್ಜನ್ಗಳು ಭಾರತದವರಾಗಿದ್ದಾರೆ. ಹಾಗಾಗಿ ಕೌಶಲ್ಯ, ಜ್ಞಾನ, ಯುವ ಸಮೂಹ ಭಾರತದಲ್ಲಿ ಕೊರತೆಯಿಲ್ಲ. ಇದನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.