ಬೆಂಗಳೂರು: ನಾವು ನೀಡಿದ್ದ ಎಲ್ಲಾ ಗ್ಯಾರಂಟಿಗಳನ್ನೂ ಆರಂಭಿಸುತ್ತಿದ್ದೇವೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್ ನಮ್ಮ ಯೋಜನೆ ಜಾರಿಯಾಗಲ್ಲ ಎಂಬ ಸಂಭ್ರಮದಲ್ಲಿದ್ದವು. ಅವರಿಗೆ ನಿರಾಸೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚುನಾವಣಾ ಪೂರ್ವದಲ್ಲಿ ನಾವು ಕೊಟ್ಟ 5 ಗ್ಯಾರಂಟಿಗಳ ಪೈಕಿ ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆ ಇಂದಿನಿಂದ ಆರಂಭವಾಗಲಿದೆ. ಗೃಹಜ್ಯೋತಿ ಯೋಜನೆಯಡಿ ಈ ತಿಂಗಳಿನಿಂದ ನಮ್ಮ ಸರ್ಕಾರ 200 ಯೂನಿಟ್‌ವರೆಗೆ ವಿದ್ಯುತ್ ಉಚಿತವಾಗಿ ನೀಡಲಿದೆ. ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಹಾಗೂ ಇನ್ನುಳಿದ 5 ಕೆಜಿ ಅಕ್ಕಿಯ ಬದಲಾಗಿ 170 ರೂ. ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ಮುಂದುವರಿದು, ಬಿಜೆಪಿ- ಜೆಡಿಎಸ್ನವರು ನಾವು ಕೊಟ್ಟ ಗ್ಯಾರಂಟಿಗಳು ಜಾರಿಯಾಗಲ್ಲ ಎಂದು ಕಂಡ ಕಂಡಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದರು. ಹಾಗೆ ಹೇಳಿಕೊಂಡು ತಿರುಗಾಡುವುದು ಅವರ ಸಹಜ ಗುಣ. ತಾನು ಕಳ್ಳ ಪರರ ನಂಬ ಮನಃಸ್ಥಿತಿ ಅವರದ್ದು. ಆದರೆ ನಾವು ಅಧಿಕಾರಕ್ಕೆ ಬಂದ ಹದಿನೈದೇ ದಿನದಲ್ಲಿ ಶಕ್ತಿ ಯೋಜನೆ ತಂದೆವು. ಇಂದಿನಿಂದ ಗೃಹಜ್ಯೋತಿ ಮತ್ತು ಅನ್ನಭಾಗ್ಯ ಜಾರಿಗೆ ಬರಲಿದೆ. ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆ ಇಂದಿನಿಂದ ಜಾರಿಯಾಗುವ ಮೂಲಕ ನಾವು ಕೊಟ್ಟ 5 ಗ್ಯಾರಂಟಿಗಳ ಪೈಕಿ ಮೂರು ಈಡೇರಿದಂತಾಗಿದೆ. ಗೃಹಲಕ್ಷ್ಮಿ ಯೋಜನೆ ಆಗಸ್ಟ್ 15 ರಂದು ಪ್ರಾರಂಭವಾಗಲಿದೆ. ಮಾತು ಕೊಡುವುದು ದೊಡ್ಡದಲ್ಲ. ಆದರೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ನಿಜವಾದ ಸವಾಲು. ಆ ಸವಾಲನ್ನು ನಾವು ಇಂದು ಮೆಟ್ಟಿ ನಿಂತಿದ್ದೇವೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಬಸ್ ದುರಂತಕ್ಕೆ ಸಂತಾಪ ಸೂಚಿಸಿರುವ ದಿನೇಶ್ ಗುಂಡೂರಾವ್, ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಮೃದ್ದಿ ಎಕ್ಸ್‌ಪ್ರೆಸ್ ವೇನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್‌ನಲ್ಲಿದ್ದ 25 ಜನ ಪ್ರಯಾಣಿಕರು ಸಜೀವ ದಹನವಾದ ಸುದ್ದಿ ಆಘಾತ ತಂದಿದೆ. ಇದೊಂದು ಆಘಾತಕಾರಿ ಘಟನೆ. ಅಪಘಾತದಲ್ಲಿ ಮೃತಪಟ್ಟ ಕುಟುಂಬದವರಿಗೆ ಸಾಂತ್ವನಗಳು ಎಂದಿದ್ದಾರೆ.
ವೈದ್ಯರ ದಿನ ಹಿನ್ನೆಲೆ ಟ್ವೀಟ್ ಮಾಡಿರುವ ಸಚಿವರು, ನಿತ್ಯ ವೈರಾಣುಗಳ ದಾಳಿಯನ್ನು ಎದುರಿಸುತ್ತಲ್ಲೇ, ರೋಗಿಗಳ ಆರೈಕೆಯನ್ನು ಮಾಡಿ, ಜೀವ ಕಾಪಾಡುವ ಜೀವಾತ್ಮದಂತಹ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು. ವೈದ್ಯಕೀಯ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದ ಡಾ. ಬಿಧನ್ ಚಂದ್ರ ರಾಯ್ ಅವರನ್ನು ಸ್ಮರಿಸುವ ಮೂಲಕ ವೈದ್ಯರಿಗೆ ನಮನ ಸಲ್ಲಿಸೋಣ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Congress Guarentee: ಬಿಪಿಎಲ್ ಕಾರ್ಡುದಾರರಿಗೆ ಈ ತಿಂಗಳು ಹಣ ಸಿಗೋದಿಲ್ಲ: ಸಚಿವ ಜಾರಕಿಹೊಳಿ
ಮಹಾರಾಷ್ಟ್ರ ಬಸ್ ದುರಂತಕ್ಕೆ ಸಿಎಂ ಸಂತಾಪ: ಮಹಾರಾಷ್ಟ್ರದಲ್ಲಿ ಸಂಭವಿಸಿರುವ ಭೀಕರ ಅಪಘಾತಕ್ಕೆ ಆಘಾತ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಮಹಾರಾಷ್ಟ್ರದ ಬುಲ್ಧಾನದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 26 ಮಂದಿ ಸಜೀವ ದಹನವಾಗಿರುವ ಸುದ್ದಿ ಕೇಳಿ ಆಘಾತವಾಯಿತು. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ತಮ್ಮವರನ್ನು ಕಳೆದುಕೊಂಡ ದುಃಖತಪ್ತ ಕುಟುಂಬಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.