ಬೆಂಗಳೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ನನ್ನ ಕಂಡರೆ ಭಯನಾ, ನನಗೆ ಅವರ ಕಂಡರೆ ಭಯನಾ ಎಂಬುದು ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗುತ್ತೆ ಎಂದು ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು. ಕೆಪಿಸಿಸಿ ಕಚೇರಿ ಬಳಿ ಮಾತನಾಡಿದ ಅವರು, ಚಲುವರಾಯಸ್ವಾಮಿಗೆ ನನ್ನ ಕಂಡರೆ ಭಯ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ನಾನು ನಕಲಿ ಪತ್ರದ ಬಗ್ಗೆ ಕುಮಾರಸ್ವಾಮಿ ಹೆಸರನ್ನು ಚರ್ಚೆನೇ ಮಾಡಿಲ್ಲ. ನಾನು ಅವರ ಹೆಸರನ್ನೂ ಹೇಳಿಲ್ಲ, ನನಗೇನ ಭಯ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಅದು ನಕಲಿ ಪತ್ರ ಎಂದು ಹೇಳಿದ್ದೇನೆ. ಅದಕ್ಕಾಗಿ ತನಿಖೆ ಮಾಡಲು ಹೇಳಿರುವೆ. ನಾನು ಕುಮಾರಸ್ವಾಮಿಯವರು ನಕಲಿ ಪತ್ರ ಕೊಟ್ಟಿದ್ದಾರೆ ಅಂದಿಲ್ಲ. ನಾನು ಅವರ ಹೆಸರು ಹೇಳೇ ಇಲ್ಲ. ಅವರು ಯಾರು ಹೆಸರು ಹೇಳುತ್ತಾರೆ ಎಂಬುದು ಗೊತ್ತಿಲ್ಲ. ನನಗೆ ಬೇಜಾರು ಕೂಡ ಇಲ್ಲ. ನಮಗೆ ಮಾಡಬೇಕಾದ ಕೆಲಸ ಹೆಚ್ಚಿದೆ ಎಂದು ಟಾಂಗ್ ನೀಡಿದರು.
ನನ್ನ ಬಗ್ಗೆ ಭಯನಾ ಅಂತಾ ಹೇಳಿದ್ದಾರೆ. ಯಾರು ಗೌರ್ನರ್ಗೆ ಫೇಕ್ ಲೆಟರ್ ಕೊಟ್ಟಿದ್ದಾರೆ ಎಂದು ಪೂರ್ಣ ಪ್ರಮಾಣದ ಮಾಹಿತಿ ಇದೆ. ಅದನ್ನು ತನಿಖೆ ಮಾಡಿ ಅಂತಾ ಹೇಳಿದ್ದೇವೆ, ತನಿಖೆ ಮಾಡ್ತಿದ್ದಾರೆ. ಲೆಟರ್ ಕೊಟ್ಟವರೇ ಕುಮಾರಸ್ವಾಮಿ ಅಂತಾ ಹೇಳಿಲ್ಲ. ನಾನು ಈ ವಿಚಾರದಲ್ಲಿ ಕುಮಾರಸ್ವಾಮಿ ಪಾತ್ರ ಇದೆ ಅಂತಾ ಹೇಳಿಲ್ಲ. ಅವರು ಟಾರ್ಗೆಟ್ ಮಾಡ್ತಾರೆ ಅಂತಾ ನಮಗೆ ಮಾಡೋಕೆ ಆಗಲ್ಲ, ನಮ್ಮದೇ ಆದ ಕೆಲಸಗಲು ಸಾಕಷ್ಟು ಇವೆ ಎಂದು ಹೇಳಿದರು.
ಹೆಚ್ಡಿಕೆ ಹೇಳಿಕೆ: ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪತ್ರ ನೀಡಿದ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ಈ ಪ್ರಕರಣದ ಬಗ್ಗೆ ನಾನು ಚರ್ಚೆಯೇ ಮಾಡಿಲ್ಲ. ಇದರಲ್ಲೂ ನನ್ನ ಹೆಸರು ಬರುತ್ತಿದೆ ಎಂದರೆ ನನ್ನ ಮೇಲಿನ ಭಯದಿಂದಲೇ ಎಂದು ಹೆಚ್ಡಿಕೆ ಹೇಳಿದ್ದರು. ವಿದೇಶ ಪ್ರವಾಸಕ್ಕೆ ತೆರಳಿ ಭಾನುವಾರ ತಡರಾತ್ರಿ ಬೆಂಗಳೂರಿಗೆ ವಾಪಸ್ ಆಗಿದ್ದ ಕುಮಾರಸ್ವಾಮಿ, ಮಾಧ್ಯಮದವರೊಂದಿಗೆ ಮಾತನಾಡಿ ರಾಜ್ಯಪಾಲರಿಗೆ ಪತ್ರ ಬರೆದಿರುವ ಹಿಂದೆ ನಿಮ್ಮ ಪಾತ್ರವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದರು.
ಇದೇ ವೇಳೆ ಕುಮಾರಸ್ವಾಮಿ ವಿದೇಶದಲ್ಲೇ ಇರಲಿ ಅದಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಹೇಳಿಕೆಗೂ ಪ್ರತಿಕ್ರಿಯೆ ನೀಡದ್ದ ಅವರು, ನಾನು ವಿದೇಶಕ್ಕೆ ಯಾರ ದುಡ್ಡಿನಿಂದ ಹೋಗಿಲ್ಲ. ವಿದೇಶಕ್ಕೆ ಹೋಗುವ ಯೋಗ್ಯತೆ ನನಗೂ ಇದೆ. ಯಾವುದೋ ಪಾಪದ ಹಣದಿಂದ ಹೋಗಬೇಕಾದ ಪರಿಸ್ಥಿತಿ ಇಲ್ಲ. ಕಾಂಬೋಡಿಯಾದ ಆಹ್ವಾನದ ಮೇರೆಗೆ ಅಲ್ಲಿಗೆ ತೆರಳಿದ್ದೆವು ಎಂದು ಹೆಚ್ಡಿಕೆ ಟಾಂಗ್ ನೀಡಿದ್ದರು.
ಇದನ್ನೂ ಓದಿ: ನನ್ನ ಮೇಲಿನ ಭಯದಿಂದ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ: ಚಲುವರಾಯಸ್ವಾಮಿಗೆ ಹೆಚ್ಡಿಕೆ ಟಾಂಗ್