ಬೆಂಗಳೂರು: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲ್ಲ. ಯಡಿಯೂರಪ್ಪನವರೇ ಉಳಿದ ಅವಧಿಗೂ ಸಿಎಂ ಆಗಿರುತ್ತಾರೆ. ನಾವೆಲ್ಲ ಸಿಎಂ ಜೊತೆಗಿದ್ದೇವೆ, ಒಗ್ಗಟ್ಟಾಗಿದ್ದೇವೆ ಎಂದು ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಳೆದ ಐದಾರು ದಿನಗಳಿಂದ ಯಡಿಯೂರಪ್ಪ ಅವರನ್ನು ಭೇಟಿಯಾಗೋಕೆ ಆಗಿರಲಿಲ್ಲ, ಹಾಗಾಗಿ ಬಂದಿದ್ದೆ. ನಿನ್ನೆ ಯಾಕೆ ಆ ರೀತಿ ಹೇಳಿದರೋ ಗೊತ್ತಿರಲಿಲ್ಲ. ಈಗ ಮಾತನಾಡಿದೆ. ಕೆಲವರ ಹೇಳಿಕೆಗಳಿಂದ ನೊಂದು ಈ ರೀತಿ ಹೇಳಿರಬಹುದು. ಮುಖ್ಯಮಂತ್ರಿಗಳು ಬದಲಾಗಲ್ಲ. ಮುಂದೆಯೋ ಅವರೇ ಸಿಎಂ. ನಾವು ಅವರನ್ನು ನಂಬಿ ಬಂದಿದ್ದೇವೆ, ಅವರು ನಮ್ಮನ್ನು ಕೈಬಿಡದೇ ರಕ್ಷಣೆ ಮಾಡಿದ್ದಾರೆ, ಮುಂದೆಯೂ ಮಾಡುತ್ತಾರೆ ಎಂದರು.
ಸಿಎಂ ವಿರುದ್ಧ ವಿರೋಧಿ ಹೇಳಿಕೆ ಕೊಡುತ್ತಿರುವವರ ಬಗ್ಗೆ ನಾನು ಏನೂ ಮಾತಾಡಲ್ಲ, ಕೆಲವೇ ದಿನಗಳಲ್ಲಿ ನಮ್ಮ ಉಸ್ತುವಾರಿ ಅರುಣ್ ಸಿಂಗ್ ಬರ್ತಾರೆ. ಅವರು ಎಲ್ಲರ ಜತೆ ಚರ್ಚೆ ಮಾಡುತ್ತಾರೆ. ಈಗಾಗಲೇ ಪ್ರಹ್ಲಾದ್ ಜೋಷಿ, ಕಟೀಲ್ ಅವರು ಸಹ ನಿನ್ನೆ ಮಾತಾಡಿದ್ದಾರೆ. ಸಿಎಂ ಸ್ಥಾನದ ಬದಲಾವಣೆ ಇಲ್ಲ ಅಂತ ಹೇಳಿದ್ದಾರೆ. ಹೈಕಮಾಂಡ್‌ಗೆ ಯಡಿಯೂರಪ್ಪನವರ ಮೇಲೆ ನಂಬಿಕೆ ಇದೆ. ಹಾಗಾಗಿಯೇ ಹೈಕಮಾಂಡ್ ಮೌನವಾಗಿದೆ ಎಂದು ವರಿಷ್ಠರ ಮೌನಕ್ಕೆ ಬೈರತಿ ಬಸವರಾಜು ಸ್ಪಷ್ಟನೆ ನೀಡಿದರು.
ಸಿಎಂಗೆ ಕೆಲವರ ಹೇಳಿಕೆಗಳಿಂದ ಅಸಮಾಧಾನ ಆಗಿದೆ. ಸಿಎಂ ಆಗಿ ಯಡಿಯೂರಪ್ಪನವರೇ ಮುಂದುವರೆಯುತ್ತಾರೆ ಎಂದು ಸಚಿವ ನಾರಾಯಣಗೌಡ ತಿಳಿಸಿದ್ದಾರೆ.