ಕೆ.ಆರ್.ಪುರ (ಬೆಂಗಳೂರು): ಇಲ್ಲಿನ ಐಟಿಐ ಮ್ಯಾನೇಜ್‌ಮೆಂಟ್ ಆಫಿಸರ್ಸ್ ಜನರಲ್ ಆಸ್ಪತ್ರೆಯಲ್ಲಿ 100 ಆಕ್ಸಿಜನ್ ಹಾಗೂ 50 ಸಾಮಾನ್ಯ ಸೇರಿ 150 ಹಾಸಿಗೆಗಳ ವ್ಯವಸ್ಥೆ ಇದ್ದು, ಇದರ ಸದುಪಯೋಗಕ್ಕೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಐಟಿಐ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳುವ ಕುರಿತಂತೆ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರೊಂದಿಗೆ ಚರ್ಚಿಸಲಾಗಿದ್ದು, ಸ್ನಾನ ಗೃಹ, ಶೌಚಾಲಯ ಹಾಗೂ ವಿಶಾಲವಾದ ಆವರಣವನ್ನೂ ಹೊಂದಿರುವ ಈ ಆಸ್ಪತ್ರೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಿ, ಶ್ರೀಘ್ರ ಸಾರ್ವಜನಿಕ ಸೇವೆಗೆ ಒದಗಿಸುವುದಾಗಿ ತಿಳಿಸಿದರು.
ಇದನ್ನೂ ಓದಿ : ವಾರದಲ್ಲಿ 4 ದಿನ ಸಂಪೂರ್ಣ ಲಾಕ್ಡೌನ್: ಸಿಎಂ ಜತೆ ಚರ್ಚಿಸಿ ತೀರ್ಮಾನ- ಡಾ. ಸುಧಾಕರ್
ಕೆ.ಆರ್.ಪುರದ ಸಾವಿರಾರು ಉದ್ಯೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ಸಲುವಾಗಿ ಸುಸಜ್ಜಿತ ವ್ಯವಸ್ಥೆ ಇರುವ ಈ ಆಸ್ಪತ್ರೆಯನ್ನು ಕೇಂದ್ರ ಸರ್ಕಾರವು 1948ರಲ್ಲಿ ಸ್ಥಾಪಿಸಿದೆ. ಇದೀಗ ಈ ಆಸ್ಪತ್ರೆಯ ನವೀಕರಣಕ್ಕೆ ಅವಶ್ಯಕವಿರುವ ಅನುದಾನ ತರುವ ಭರವಸೆಯನ್ನು ಭೈರತಿ ಬಸವರಾಜ್ ನೀಡಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಸಚಿವರ ಜೊತೆ ಟಿ.ಹೆಚ್.ಒ ಚಂದ್ರಶೇಖರ್, ಮಾಜಿ ಪಾಲಿಕೆ ಸದಸ್ಯ ಅಂತೋಣಿ ಸ್ವಾಮಿ ಹಾಗು ಐಟಿಐ ಆಸ್ಪತ್ರೆಯ ವ್ಯವಸ್ಥಾಪಕ ಅಧಿಕಾರಿಗಳು ಸೇರಿದಂತೆ ಮತ್ತಿತರರು ಇದ್ದರು.