ಬೆಂಗಳೂರು: ಯಾವುದೇ ಕಾರಣಕ್ಕೂ ಲಾಕ್‌ಡೌನ್ ಜಾರಿ ಮಾಡದಿರಲು ಸರ್ಕಾರ ನಿರ್ಧರಿಸಿರುವುದಾಗಿ ಕೃಷಿ ಸಚಿವ ಬಿ.ಸಿ. ಪಾಟೀಲ ಸ್ಪಷ್ಟಪಡಿಸಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಬಿ.ಸಿ. ಪಾಟೀಲ, ಪ್ರಸಕ್ತ ಆರ್ಥಿಕ ಪರಿಸ್ಥಿತಿಯಲ್ಲಿ ಲಾಕ್‌ಡೌನ್ ಜಾರಿಗೊಳಿಸುವ ಪರಿಸ್ಥಿತಿ ಇಲ್ಲ. ಕಳೆದ ವರ್ಷಕ್ಕೂ ಈ ವರ್ಷಕ್ಕೂ ಪರಿಸ್ಥಿತಿ ಬೇರೆ ಇದೆ. ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ. ಜನರೂ ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ವಿರುದ್ಧ ಕಿಡಿ: ಕೋರ್ಟ್ಗೆ ಹೋಗುವುದು ನಮ್ಮ ಹಕ್ಕು, ಅದನ್ನ ಪ್ರಶ್ನೆ ಮಾಡುವುದಕ್ಕೆ ಅವರಿಗೇನು ಹಕ್ಕಿದೆ? ನಮ್ಮ ಹಕ್ಕನ್ನು ಪ್ರಶ್ನೆ ಮಾಡುವುದಕ್ಕೆ ಕಾಂಗ್ರೆಸ್ನವರು ಯಾರು ಎಂದು ಪಾಟೀಲ ಪ್ರಶ್ನಿಸಿದರು.
ಕಾಂಗ್ರೆಸ್ನವರು ಇಷ್ಟು ಹೀನಾಯ ಸ್ಥಿತಿಗೆ ಹೋಗ್ತಾರೆ ಅಂತ ಅಂದುಕೊಂಡಿರಲಿಲ್ಲ. ನಾವು ಕೋರ್ಟ್ಗೆ ಹೋಗುವುದಕ್ಕೂ ಅವರಿಗೂ ಏನು ಸಂಬಂಧ? ಅದನ್ನು ಪ್ರಶ್ನೆ ಮಾಡುವ ಹಕ್ಕು ಅವರಿಗೇನಿದೆ? ಕಾಂಗ್ರೆಸ್ನವರು ವಿಷಯಾಧಾರಿತ ಪಾಲಿಟಿಕ್ಸ್ ಮಾಡಬೇಕಿತ್ತು. ಆದರೆ ಅದನ್ನು ಬಿಟ್ಟು ಎಲ್ಲೋ ಒಂದು ಕಡೆ ಅವರೇ ಇದನ್ನೆಲ್ಲ ಮಾಡ್ಸಿದ್ದಾರೆ ಅನಿಸುತ್ತಿದೆ. ನಮ್ಮ ಮೇಲೆ ಕಾಂಗ್ರೆಸ್ನವರಿಗೆ ದ್ವೇಷ ಇದೆ, ಸರ್ಕಾರ ಬೀಳಿಸಿದ್ದೇವೆ ಅನ್ನೋ ಸಿಟ್ಟಿದೆ. ಹೀಗಾಗಿ ಇದನ್ನೆಲ್ಲ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾವು ಅವರ ಸರ್ಕಾರವನ್ನು ತಗೆದಿದ್ದೇವೆ, ಜನರಿಂದ ಆಯ್ಕೆಯಾಗಿ ಬಂದಿದ್ದೇವೆ. ನಾವು ಮಾಡುವ ಕೆಲಸವನ್ನು ಅವರಿಗೆ ಸಹಿಸಲು ಆಗ್ತಾ ಇಲ್ಲ. ನಮ್ಮನ್ನು ತೇಜೋವಧೆ ಮಾಡಲು ಹೀಗೆ ಮಾಡುತ್ತಿದ್ದಾರೆ. ಕಾಂಗ್ರೆಸ್ನವರಿಗೆ ಕೆಲಸ ಇಲ್ಲ. ಅವರೇನೂ ಎಲ್ಲರನ್ನು ಗುತ್ತಿಗೆ ಪಡೆದುಕೊಂಡಿದ್ದಾರಾ ಎಂದು ಕಿಡಿ ಕಾರಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ರೈತರ ಪರವಾಗಿಯೇ ಇರುವ ಕಾಯ್ದೆಗಳಾದ್ದರಿಂದ ಆ ಕಾಯ್ದೆಗಳಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಇದೇ ವೇಳೆ ತಿಳಿಸಿದರು.