ಬೆಂಗಳೂರು: ರೈತರ ಪ್ರತಿಭಟನೆ ಹಿನ್ನೆಲೆ ಜನರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ರೈತರಿಂದ ಹೆದ್ದಾರಿ ತಡೆ ಪ್ರತಿಭಟನೆ ಸಂಬಂಧ ಮಾತನಾನಾಡಿದ ಅವರು, ರಾಜ್ಯಾದ್ಯಂತ ರೈತ ಸಂಘಟನೆಗಳು ಹೆದ್ದಾರಿ ಚಳವಳಿಯನ್ನ ಮಾಡುತ್ತಿವೆ. ಎಲ್ಲಾ ಜಿಲ್ಲೆಗಳಲ್ಲಿ ರೈತ ಸಂಘಟನೆಗಳ ಜೊತೆ ಮಾತನಾಡಿ ಸುಗಮ ಸಂಚಾರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ. ಯಾವುದೇ ಸಮಸ್ಯೆ ಆಗದೇ ಸುಗಮ ಸಂಚಾರವಾಗಲಿದೆ ಎಂದರು.
ಪಂಚಮಸಾಲಿ ಲಿಂಗಾಯತ ಒಬಿಸಿ ಅಂತ ಗುರುತಿಸಿದ್ದೇ ಬಿಎಸ್‌ವೈ:
ಲಿಂಗಾಯತರಿಗೆ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿದ ಬೊಮ್ಮಾಯಿ ಪಂಚಮಸಾಲಿ ಲಿಂಗಾಯತ ಸಮುದಾಯ ಹಿಂದುಳಿದ ವರ್ಗ ಅಂತ ಗುರುತಿಸಿದವರೇ ಯಡಿಯೂರಪ್ಪ. ಹಿಂದಿನ ಬಾರಿ ಸಿಎಂ ಆಗಿದ್ದಾಗ ಪಂಚಮಸಾಲಿ ಲಿಂಗಾಯತ ಸಮಯದಾಯವನ್ನು 3ಬಿ ಗೆ ಗುರುಸಿದ್ದೇ ಯಡಿಯೂರಪ್ಪ. ಈ ಕೆಲಸವನ್ನು ಬೇರೆ ಯಾರೂ ಮಾಡಲಿಲ್ಲ. ಈಗ 2ಎ ಮೀಸಲಾತಿಗೆ ಪ್ರಸ್ತಾವನೆ ಬಂದಿದೆ. ಈ ಪ್ರಸ್ತಾವನೆಯನ್ನೂ ಸಿಎಂ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳಿಸಿಕೊಟ್ಟಿದ್ದಾರೆ. ಈ ಬೇಡಿಕೆ ಸಂಬಂಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಕೆಲವು ರಾಜ್ಯಗಳು ಇದೇ ಪ್ರಸ್ತಾವನೆ ಮಾಡಿದಾಗ ಕೋರ್ಟ್ ತಡೆ ನೀಡಿರುವುದು ಉಂಟು. ಇದೆಲ್ಲವನ್ನೂ ಗಮನಿಸಬೇಕಾಗುತ್ತದೆ ಎಂದು ವಿವರಿಸಿದರು.
ಹಿಂದುಳಿದ ವರ್ಗಗಳ ಆಯೋಗದಿಂದ ಶಿಫಾರಸು ಬಂದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಕುಲಶಾಸ್ತ್ರೀಯ ಅಧ್ಯಯನದ ಬಗ್ಗೆ ಹಿಂದುಳಿದ ವರ್ಗಗಳ ಆಯೋಗವೇ ನಿರ್ಧಾರ ಕೈಗೊಳ್ಳಲಿದೆ. ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡೋದು ಕೇಂದ್ರ ನಿರ್ಧರಿಸುವ ವಿಚಾರವಾಗಿದೆ. ಸಿಎಂ ಕೂಡಾ ಕೇಂದ್ರದ ಜೊತೆ ಈ ಬಗ್ಗೆ ಚರ್ಚೆ ಮಾಡಬೇಕು ಅಂತಷ್ಟೇ ಹೇಳಿದ್ದಾರೆ ಎಂದರು.
ಓದಿ: ಕೃಷಿ ಕಾಯ್ದೆ ವಿರೋಧಿಸಿ ಪ್ರಧಾನಿಗೆ 'ರಕ್ತ ಪತ್ರ' ರವಾನಿಸಿದ ಕರ್ನಾಟಕ ಕಿಸಾನ್ ಕಾಂಗ್ರೆಸ್
ಬಿಎಸ್‌ವೈ ಹೇಳಿಕೆಗೆ ಸ್ವಾಮೀಜಿಗಳ ಆಕ್ರೋಶ ವಿಚಾರವಾಗಿ ಮಾತನಾಡಿದ ಸಚಿವ ಬೊಮ್ಮಾಯಿ, ಹಿಂದುಳಿದ ವರ್ಗಗಳಿಗೆ ಸೇರಿಸುವುದರಲ್ಲಿ ಎರಡು ರೀತಿ ಇದೆ. ಒಂದು ರಾಜ್ಯಕ್ಕೆ ಆ ನಿರ್ಧಾರ ಸೀಮಿತವಾದದ್ದು ಹಾಗೂ ಕೇಂದ್ರಕ್ಕೆ ಸೀಮಿತವಾಗಿರೋದು. ಅದನ್ನ ಕೇಂದ್ರ ನಾಯಕರ ಜೊತೆ ಚರ್ಚಿಸಬೇಕು ಎಂದು ಹೇಳಿದ್ದಾರೆ. ಅದನ್ನು ಹೊರತು ಬೇರೆ ತಪ್ಪಾರ್ಥ ಕಲ್ಪಿಸೋದು ಬೇಡ. ಮೊನ್ನೆ ಸಚಿವರ ಮೂಲಕ ಸ್ವಾಮೀಜಿಗಳಿಗೆ ಸಂದೇಶ ರವಾನೆ ಮಾಡಿದ್ರು. ಅದಕ್ಕೆ ಕೂಡಲೇ ನಿನ್ನೆ ಸಂಜೆ ಆದೇಶ ಮಾಡಿದರು ಎಂದು ಸ್ಪಷ್ಟಪಡಿಸಿದರು.