ಬೆಂಗಳೂರು: ಹೆಚ್ಡಿಕೆ ಗಾಳಿಯಲ್ಲಿ ಗುಂಡು ಹೊಡಿಯೋದು, ಅದಕ್ಕೆ ಈಗ 19 ಸ್ಥಾನಕ್ಕೆ ಇಳಿದಿದ್ದಾರೆ ಎಂದು ಯುವ ಸಬಲೀಕರಣ, ಕ್ರೀಡೆ ಮತ್ತು ಬುಡಕಟ್ಟು ಕಲ್ಯಾಣ ಸಚಿವ ಬಿ ನಾಗೇಂದ್ರ ಟೀಕಿಸಿದರು. ವಿಧಾನಸೌಧದಲ್ಲಿ ಹೆಚ್ ಡಿಕೆಯವರ ವೈಎಸ್ಟಿ ತೆರಿಗೆ ಆರೋಪಕ್ಕೆ ಪ್ರತಿಕ್ರಿಯಿಸುತ್ತ, ಅವರು ಎರಡು ಬಾರಿ ಸಿಎಂ ಆಗಿದ್ದವರು. ಸಿಎಂ ಆಗಿದ್ದಾಗ ಇಲಾಖೆ ಯಾವ ರೀತಿ ನಡೆಸಿದರು ಎಂದು ಗೊತ್ತಿದೆ.
ಸಿಎಂ ಸುಪುತ್ರ ಯಾವುದರಲ್ಲೂ ಹಸ್ತಕ್ಷೇಪ ಮಾಡಿಲ್ಲ. ಆಧಾರ ರಹಿತ ಆರೋಪ ಮಾಡಿದ್ದಾರೆ. ಅದಕ್ಕೆ ಅವರ ಪಕ್ಷ 19 ಸ್ಥಾನಕ್ಕೆ ಇಳಿದಿದೆ. ಜನ ಮುಂದೆಯೂ ಅವರಿಗೆ ಪಾಠ ಕಲಿಸ್ತಾರೆ. ವರ್ಗಾವಣೆ ಕೇಳಿದಾಗ ಶಿಫಾರಸು ಮಾಡೋದು ಸಹಜ. ಮಾಜಿ ಸಿಎಂ ಹೇಳಿಕೆ ಹಾಸ್ಯಾಸ್ಪದ ಎಂದು ತಿರುಗೇಟು ನೀಡಿದರು.
ವದಂತಿ ಮಾತನ್ನು ಅವರು ಹೇಳುತ್ತಿದ್ದಾರೆ. ಇದು ಅವರ ಸ್ಥಾನಕ್ಕೆ ಗೌರವ ತರಲ್ಲ. ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಈ ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಈಗಲೂ ಅದನ್ನು ಅವರು ಮುಂದುವರಿಸುತ್ತಿದ್ದಾರೆ. ಹೀಗೆ ಅವರು ಮುಂದುವರಿದರೆ ಲೋಕಸಭೆಯಲ್ಲಿ ಜನರು ಪಾಠ ಕಲಿಸುತ್ತಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸ್ಪಷ್ಟವಾದ ಆಡಳಿತ ಕೊಡುತ್ತಿದ್ದಾರೆ. ಯಾವುದೇ ಭ್ರಷ್ಟಾಚಾರ ನಡೆಯುತ್ತಿಲ್ಲ. ಉತ್ತಮ ಆಡಳಿತ ನೀಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದರು.
ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾಪಟು ಹಾಗೂ ಕೋಚ್ ಹೆಂಡತಿ ನಡುವೆ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಇಬ್ಬರ ಗಲಾಟೆಯನ್ನು ಮಾಧ್ಯಮಗಳ ಮೂಲಕ ನೋಡಿದೆ. ಅವರಿಬ್ಬರೂ ನಮ್ಮ ಇಲಾಖೆ ಅಡಿಯಲ್ಲಿ ಬರುವವರಲ್ಲ. ಮಕ್ಕಳ ಕ್ರೀಡೆಗೆ ಅನುಕೂಲವಾಗಲಿ ಎಂದು ಕ್ರೀಡಾಂಗಣದಲ್ಲಿ ತರಬೇತಿ ಅವಕಾಶ ಕಲ್ಪಿಸಿದ್ದೇವೆ. ಒಬ್ಬರು ಕ್ರೀಡಾಪಟು ಮತ್ತೊಬ್ಬರು ಕೋಚ್ ಹೆಂಡತಿಯಂತೆ. ಕ್ರೀಡಾಪಟು ಹಾಗೂ ಮಕ್ಕಳ ಮುಂದೆ ಈ ರೀತಿ ವರ್ತನೆ ಮಾಡಿರುವುದು ಸರಿಯಲ್ಲ. ಕೂಡಲೇ ಅವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಹೆಚ್ ಡಿಕೆ ಆರೋಪವೇನು?: ಇಂದು ಹೆಚ್ ಡಿ ಕುಮಾರಸ್ವಾಮಿ ಅವರ ಜೆಡಿಎಸ್ ಜೆಪಿ ಭವನದಲ್ಲಿ ಮಾತನಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹೊಸದಾಗಿ ವೈಎಸ್ ಟಿ (YST) ತೆರಿಗೆ ಆರಂಭವಾಗಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ವೈಎಸ್ ಟಿ ಎಂದರೆ ಏನು? ಎಂಬ ಪ್ರಶ್ನೆಗೆ ಮಧ್ಯರಾತ್ರಿವರೆಗೂ ತಮ್ಮ ಮನೆಗಳಲ್ಲಿ ಅಧಿಕಾರಿಗಳ ಸಭೆ ಮಾಡುವ ಘನಂದಾರಿ ವ್ಯಕ್ತಿಗಳನ್ನು ಕೇಳಿ? ಈಗಾಗಲೇ ವರ್ಗಾವಣೆ ದಂಧೆಗಾಗಿ ಯಾರನ್ನೆಲ್ಲ ಫೀಲ್ಡಿಗೆ ಇಳಿಸಿ ಗುಪ್ತ ಸಭೆಗಳನ್ನು ಮಾಡುತ್ತಿದ್ದಾರೋ ಅವರನ್ನೇ ಕೇಳಿ? ನೀವೂ ಪತ್ತೆ ಹಚ್ಚಿ ಎಂದಿದ್ದಾರೆ.
ಇದನ್ನೂ ಓದಿ: ವಿಧಾನಮಂಡಲ ಜಂಟಿ ಅಧಿವೇಶನಕ್ಕೂ ಮುನ್ನ ಪ್ರತಿಪಕ್ಷ ನಾಯಕನ ಆಯ್ಕೆ ಮಾಡದ ಬಿಜೆಪಿ!