ಬೆಂಗಳೂರು: 'ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೂಟ್‌ಕೇಸ್ ಒಯ್ಯಲು ಬರುವ ದಲ್ಲಾಳಿ' ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮುಳುಗುವ ಹಡಗು ಎಂದು ಅರುಣ್ ಸಿಂಗ್ ಹೇಳಿದ್ದರು. ಅದಕ್ಕೆ ಚೀಪ್ ಆಗಿ ಮಾಜಿ ಸಿಎಂ ಹೆಚ್ಡಿಕೆ ಹೇಳಿಕೆ ನೀಡಿದ್ದಾರೆ. ಆ ಬಗ್ಗೆ ಏನಾದರೂ ಸಾಕ್ಷಿ ಇದ್ದರೆ ಬಹಿರಂಗಪಡಿಸಲಿ, ನಮ್ಮ ವರಿಷ್ಠರನ್ನು ಈ ರೀತಿ ಅವಹೇಳನ ಮಾಡಿದ್ದು ಸರಿಯಲ್ಲ. ಅದನ್ನು ನಾನು ಖಂಡಿಸುತ್ತೇನೆ ಎಂದರು.
ನಿರಾಧಾರ ಅಪಾದನೆ ಮಾಡುವುದು ಸರಿಯಲ್ಲ. ಈ ರೀತಿಯ ಆರೋಪ ಕರ್ನಾಟಕದ ಸಂಸ್ಕೃತಿಗೆ ವಿರುದ್ಧ. ಅವರ ಪಕ್ಷ ಸದೃಢವಾಗಿದ್ದರೆ ತಿಳಿಸಲಿ, ಅದರ ಹೊರತಾಗಿ ಈ ರೀತಿಯ ನಿರಾಧಾರ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಸಚಿವರು ಹೇಳಿದರು.
'ಹಣ ಪಡೆದು ವರ್ಗಾವಣೆ ಮಾಡುವುದು ಕಾಂಗ್ರೆಸ್ ಸಂಸ್ಕೃತಿ'
ವರ್ಗಾವಣೆಗೆ ಹಣ ಪಡೆಯುತ್ತಾರೆಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಣ ಪಡೆದು ವರ್ಗಾವಣೆ ಮಾಡುವುದು ಅವರ ಸಂಸ್ಕೃತಿ. ಅವರ ಸರ್ಕಾರದ ಕೆಲಸವನ್ನು ತೋರಿಸ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರತಿಪಕ್ಷದಲ್ಲಿ ಇರುವುದರಿಂದ ಆ ರೀತಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಇಂತಹ ದಂಧೆಗಳು ನಡೆದಿದ್ದವು. ಹಣ ಪಡೆದು ವರ್ಗಾವಣೆ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ಈ ಸಂಸ್ಕೃತಿಯಿಂದ ಹೊರ ಬರುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಸಿದ್ದರಾಮಯ್ಯ ಅವರದ್ದು ಹಿಟ್ ಆಂಡ್ ರನ್ ಹೇಳಿಕೆ ಎಂದರು.
ಇಲಾಖೆಗಳಿಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲವೆಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲಾ ಇಲಾಖೆಗಳಿಗೆ ಅನುದಾನ ಬಿಡುಡಗೆಯಾಗಿದೆ. ಕೋವಿಡ್ನಿಂದಾಗಿ ಸ್ಪಲ್ಪ ಹಿನ್ನಡೆಯಾಗಿತ್ತು. ಈಗ ಸುಧಾರಿಸುತ್ತಿದೆ. ಎಲ್ಲವೂ ಸರಿಯಾಗಿದೆ. ಬಿಜೆಪಿ ಪಕ್ಷ ಹಾಗೂ ಸರ್ಕಾರ ಸದೃಢವಾಗಿದೆ. ಕೇಂದ್ರದ ಅನುದಾನ ಪಡೆದುಕೊಂಡು ರಾಜ್ಯಕ್ಕೆ ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ಕೊಡುತ್ತಿದ್ದೇವೆ. ನೀರಾವರಿ ಯೋಜನೆ ವಿಚಾರವಾಗಿ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಂಡಿದೆ. ರಾಜ್ಯದ ಹಿತಕ್ಕಾಗಿ ಉತ್ತಮ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: IPS ಅಧಿಕಾರಿ ಪತ್ನಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ IFS ಪತಿ