ಬೆಂಗಳೂರು: ಮಲ್ಲೇಶ್ವರಂ ಕ್ಷೇತ್ರದಲ್ಲಿ ನಡೆಯುತ್ತಿರುವ ದೂರದೃಷ್ಟಿಯ ಅಭಿವೃದ್ಧಿ ಕಾಮಗಾರಿಗಳ ವಿರುದ್ಧ ಪ್ರತಿಭಟಿಸುತ್ತಿರುವ ಶಕ್ತಿಗಳ ಹಿಂದೆ ರಾಜಕೀಯ ದುರುದ್ದೇಶವಿದೆ. ಇದಕ್ಕೆ ಕ್ಷೇತ್ರದ ಜನರು ಸೊಪ್ಪು ಹಾಕಲ್ಲ ಎಂದು ಸ್ಥಳೀಯ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಮಲ್ಲೇಶ್ವರಂನ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಗಳಿಂದ ಸಾರ್ವಜನಿಕರಿಗೆ ಅಡಚಣೆಯಾಗುತ್ತಿದೆ ಎಂದು ಭಾನುವಾರ ಕೆಲವರು ನಡೆಸಿರುವ ಪ್ರತಿಭಟನೆಯ ಸಂಬಂಧ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯ ಮಾಡಬೇಕೆನ್ನುವವರು ಪಕ್ಷದ ಬ್ಯಾನರ್ ಇಟ್ಟುಕೊಂಡೇ ಪ್ರತಿಭಟನೆ ಮಾಡಬಹುದಿತ್ತು. ಪಕ್ಷದ ಬಾವುಟವನ್ನು ಪಕ್ಕಕ್ಕೆ ಸರಿಸಿ, ಸ್ಥಳೀಯ ನಿವಾಸಿಗಳ ಹೆಸರಿನಲ್ಲಿ ಪ್ರತಿಭಟನೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
15 ವರ್ಷಗಳಿಂದ ಅಭಿವೃದ್ಧಿ ಕಾರ್ಯ: ಮಲ್ಲೇಶ್ವರಂ ಕ್ಷೇತ್ರ 15 ವರ್ಷಗಳ ಹಿಂದೆ ಹೇಗಿತ್ತು? ಈಗ ಹೇಗಾಗಿದೆ ಎನ್ನುವುದನ್ನು ಇತಿಹಾಸದ ಪುಟಗಳನ್ನು ನೋಡಿ ಅರ್ಥ ಮಾಡಿಕೊಳ್ಳಬೇಕು. ಕುಡಿಯುವ ನೀರಿಗೆ ಬರ ಇತ್ತು, ಒಳಚರಂಡಿ ವ್ಯವಸ್ಥೆ ಹದಗೆಟ್ಟಿತ್ತು. ಇದ್ದ ಮೈದಾನಗಳು ಒಂದು ರೀತಿ ಡ್ರೈವಿಂಗ್ ಶಾಲೆಗಳಾಗಿದ್ದವು. ತಿಂಗಳುಗಟ್ಟಲೇ ವಸ್ತು ಪ್ರದರ್ಶನಗಳು ನಡೆಯುತ್ತಿದ್ದ ಮೈದಾನಗಳು ವರ್ಷದಲ್ಲಿ ಕೆಲ ದಿನ ಕೂಡ ಮಕ್ಕಳ ಆಟಕ್ಕೆ ಸಿಗುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬೇರೆಯೇ ಇದೆ. ವಾಸ್ತವತೆ ತಿಳಿಯದೆ ರಾಜಕೀಯ ದುರುದ್ದೇಶದ ಇಂತಹ ಪ್ರತಿಭಟನೆಗಳು ಜನ ವಿರೋಧಿಯಾಗಿವೆ ಎಂದು ಟೀಕಿಸಿದ್ದಾರೆ.
ಒಳಚರಂಡಿ 70 ವರ್ಷ ಹಳೆಯದು: ಕ್ಷೇತ್ರದಲ್ಲಿ ಒಳಚರಂಡಿ ಕೊಳವೆ 60 ರಿಂದ 70 ವರ್ಷಗಳಷ್ಟು ಹಳೆಯದಾಗಿದ್ದು ಶಿಥಿಲವಾಗಿದ್ದವು. ಜತೆಗೆ, ಇಲ್ಲಿನ ಮ್ಯಾನ್ ಹೋಲ್ಗಳು ಕೂಡ ತೀರಾ ಹಳೆಯದಾಗಿದ್ದು, ಸರಾಗವಾಗಿ ತ್ಯಾಜ್ಯ ನೀರು ಹರಿದು ಹೋಗುತ್ತಿರಲಿಲ್ಲ. ಈಗ ಇವೆಲ್ಲವನ್ನೂ ಬದಲಿಸಿ, ಹೊಸ ಕೊಳವೆ ಮತ್ತು ಪ್ರೀಕಾಸ್ಟ್ ಮ್ಯಾನ್ ಹೋಲ್ಗಳನ್ನು ಇಡೀ ಕ್ಷೇತ್ರದಲ್ಲಿ ಅಳವಡಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ರಸ್ತೆ ಅಗೆಯುವುದು ಅನಿವಾರ್ಯ: ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಬೇಕೆಂದರೆ ರಸ್ತೆ ಅಗೆಯುವುದು ಅನಿವಾರ್ಯವಾಗುತ್ತದೆ. ಆದರೆ, ಕ್ಷೇತ್ರದಲ್ಲಿ ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ, ಕೂಡಲೇ ಗುಂಡಿಗಳನ್ನು ಮುಚ್ಚಿಸಲಾಗುತ್ತಿದೆ ಎಂದು ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.
ಸ್ಯಾಂಕಿ ಕೆರೆ ಅತ್ಯುತ್ತಮ ತಾಣವಾಗಿ ಅಭಿವೃದ್ಧಿ: ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸ್ಯಾಂಕಿ ಕೆರೆಯನ್ನು ವಾಯುವಿಹಾರಿಗಳ ಪಾಲಿಗೆ ಅತ್ಯುತ್ತಮ ತಾಣವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇವೆಲ್ಲ ಚಟುವಟಿಕೆಗಳನ್ನು ಸ್ಯಾಂಕಿ ಟ್ಯಾಂಕ್ ವಾಯುವಿಹಾರಿಗಳ ಸಂಘವನ್ನು ವಿಶ್ವಾಸಕ್ಕೆ ತೆಗೆದು ಕೊಂಡೇ ಮಾಡಲಾಗುತ್ತಿದ್ದು, ಒಂದು ತಿಂಗಳಲ್ಲಿ ಬಹುತೇಕ ಕಾಮಗಾರಿ ಪೂರ್ಣ ಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.