ಬೆಂಗಳೂರು : ಜನರ ಅನುಕೂಲಕ್ಕಾಗಿ ಇಂದಿನಿಂದ ವೀಕೆಂಡ್ ಕರ್ಫ್ಯೂ ವಾಪಸ್ ಪಡೆದಿದ್ದೇವೆ. ಜನ ಮಾರ್ಗಸೂಚಿ ಪಾಲಿಸದೆ ಮೈಮರೆತು ಪರಿಸ್ಥಿತಿ ಹೆಚ್ಚು ಕಡಿಮೆ ಆದರೆ ಲಾಕ್ಡೌನ್ ಕೂಡ ಜಾರಿ ಮಾಡುವ ನಿರ್ಧಾರಕ್ಕೆ ಸರ್ಕಾರ ಮುಂದಾಗಲಿದೆ. ಹಾಗಾಗಿ, ಜನರು ಕೋವಿಡ್ ಮಾರ್ಗಸೂಚಿ ಪಾಲಿಸಿ ಸಹಕಾರ ನೀಡಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇವತ್ತಿನಿಂದ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ಜನರ ಹೊಣೆಗಾರಿಕೆ ಹೆಚ್ಚಾಗಿದೆ.
ನಮ್ಮ ಪ್ರಾಣ, ನಮ್ಮ ಆರೋಗ್ಯ, ನಮ್ಮ ಕೈಯಲ್ಲಿದೆ ಎನ್ನುವ ಜವಾಬ್ದಾರಿಯಿಂದ ಜನ ಸಹಕರಿಸಬೇಕು. ಹೇಗೆ ಬೇಕೋ ಹಾಗೆ ಜನತೆ ವರ್ತಿಸದರೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದರೆ ಲಾಕ್ಡೌನ್ ಮಾಡುವ ಸಾಧ್ಯತೆ ಕೂಡ ಇದೆ. ಸರ್ಕಾರಕ್ಕೆ ಜನರ ಪ್ರಾಣ ಉಳಿಸುವುದು ಮುಖ್ಯ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: BREAKING : ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದು.. ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧಾರ..
ವೀಕೆಂಡ್ ಕರ್ಫ್ಯೂನಿಂದ ಬೀದಿ ಬದಿ ವ್ಯಾಪಾರಿಗಳು, ಆಟೋ, ಹೂವಿನ ವ್ಯಾಪಾರಿಗಳು, ಸಾಮಾನ್ಯ ಬಡವರಿಗೆ ಸಾಕಷ್ಟು ತೊಂದರೆ ಉಂಟಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ವಾರಾಂತ್ಯ ಕರ್ಫ್ಯೂವನ್ನು ತೆಗೆದು ಹಾಕಲಾಗಿದೆ. ಕೋವಿಡ್ ಕೇಸ್ಗಳ ಸಂಖ್ಯೆ ಜಾಸ್ತಿ ಆಗುತ್ತಿದ್ದರೂ ಕೂಡ ನಾವು ವೀಕೆಂಡ್ ಕರ್ಫ್ಯೂ ತೆಗೆದು ಹಾಕುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ.
ವೀಕೆಂಡ್ ಕರ್ಫ್ಯೂ ಒಂದು ಹೊಣೆಗಾರಿಕೆಯನ್ನಾಗಿ, ಮಾನಸಿಕವಾಗಿ ಜನರು ಸ್ವೀಕಾರ ಮಾಡಿದ್ದಾರೆ. ಆ ಮಾರ್ಗಸೂಚಿ ಪಾಲನೆ ಮಾಡುತ್ತಾರೆ ಎನ್ನುವ ಮನಸ್ಥಿತಿಯಲ್ಲಿಯೇ ನಾವು ಈ ನಿರ್ಧಾರ ಕೈಗೊಂಡಿದ್ದು, ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ