ಬೆಂಗಳೂರು: ಇಂದು ಬಿಸಿಯೂಟ ಕಾರ್ಯಕರ್ತೆಯರು ಬೆಂಗಳೂರು ನಗರಕ್ಕೆ ಪ್ರತಿಭಟನೆ ನಡೆಸಲು ಬಂದಿದ್ದು, ಪ್ರತಿಭಟನೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಅವಕಾಶ ಮಾಡಿಕೊಡಲಿಲ್ಲ.
ಹೀಗಾಗಿ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಅವರ ನೇತೃತ್ವದಲ್ಲಿ, ಕೆಲ ಕಾರ್ಯಕರ್ತೆಯರನ್ನ ವಶಕ್ಕೆ ಪಡೆಯಲಾಗಿದೆ. ಆದರೆ ಪ್ರತಿಭಟನೆಗೆ ಹೋಗಲು ಆಗದೇ ಪೊಲೀಸರ ವಶದಲ್ಲಿರುವ ಬಿಜಾಪುರ ಹಾಗೂ ಬೆಳಗಾವಿಯ ಕೆಲ ಬಿಸಿಯೂಟ ಕಾರ್ಯಕರ್ತೆಯರು, ಪೊಲೀಸ್ ಪೇದೆಗಳಿಗೆ ಖಡಕ್ ರೊಟ್ಟಿ ಹಂಚಿ ತಿಂದು ಪೊಲೀಸರ ಪ್ರೀತಿಗೆ ಪಾತ್ರರಾಗಿದ್ದಾರೆ.
ಒಂದೆಡೆ ಖಡಕ್ ರೊಟ್ಟಿ ಸವಿದ್ರೇ ಮತ್ತೊಂದೆಡೆ ಸೋಲದೇವನಹಳ್ಳಿ ಪೋಲಿಸರು, 8ನೇ ಮೈಲಿಯಲ್ಲಿ 60ಕ್ಕೂ ಹೆಚ್ಚು ಬಿಸಿಯೂಟ ಮಹಿಳಾ ಕಾರ್ಯಕರ್ತರನ್ನ ವಶಕ್ಕೆ ಪಡೆದಿದ್ದಾರೆ. ಆದರೆ ಮಹಿಳಾ ಪೇದೆ ಶೀಲಾಕುಮಾರಿ ದೂರದೂರುಗಳಿಂದ ಬಂದಂತಹ ಮಹಿಳೆಯರಿಗೆ ಪ್ರೀತಿಯಿಂದ ಚಾಕಲೇಟ್ ತಂದು ಹಂಚಿಕೆ ಮಾಡಿ, ಕಾರ್ಯಕರ್ತೆಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.