ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಕಾರಣದಿಂದ ಶಾಲಾ ಬಾಗಿಲು ಮುಚ್ಚಿದ್ದರಿಂದ ಮಕ್ಕಳಿಗಾಗಿ ನೀಡಲಾಗುತ್ತಿದ್ದ ಮಧ್ಯಾಹ್ನದ ಬಿಸಿಯೂಟಕ್ಕೆ ಕೊಕ್ ನೀಡಲಾಗಿತ್ತು. ಇದೀಗ ಕೋವಿಡ್ ಇಳಿಕೆಯಾಗುತ್ತಿದ್ದು ಶಾಲೆಗಳು ಮತ್ತೆ ಎಂದಿನಂತೆ ಆರಂಭಗೊಂಡಿವೆ. ಹಾಗಾಗಿ, ಇದೇ ಅಕ್ಟೋಬರ್ 21 ರಂದು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಮತ್ತೆ ಪ್ರಾರಂಭ ಮಾಡಲಾಗುವುದು ಅಂತ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಎಸ್ಎಸ್ಎಲ್ಸಿ ಪೂರಕ ಪರೀಕ್ಷಾ ಫಲಿತಾಂಶ ಪ್ರಕಟಿಸಿದ ಬಳಿಕ ಮಾತನಾಡಿದ ಸಚಿವರು, ಸರ್ಕಾರಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳಲ್ಲಿ ಆರ್ಥಿಕವಾಗಿ ಹಿಂದುಳಿದವರೇ ಹೆಚ್ಚು. ಸದ್ಯ ಅಕ್ಟೋಬರ್ 20 ತನಕ ರಜೆ ಘೋಷಿಸಲಾಗಿದೆ. ಹೀಗಾಗಿ, ರಜೆ ಮುಗಿದ ಬಳಿಕವೇ ಮಧ್ಯಾಹ್ನದ ಬಿಸಿಯೂಟ ಶುರುವಾಗಲಿದೆ ಎಂದರು.
ಶಾಲಾ-ಕಾಲೇಜು ಹಾಜರಾತಿ ಉತ್ತಮ:
ರಾಜ್ಯಾದ್ಯಂತ ಶಾಲಾ-ಕಾಲೇಜು ಹಾಜರಾತಿ ಉತ್ತಮವಾಗಿದೆ. ಹಲವು ಶಾಲಾ-ಕಾಲೇಜುಗಳು ಸ್ಯಾಟ್ಸ್ನಲ್ಲಿ ಹಾಜರಾತಿ ಅಂಕಿ-ಅಂಶವನ್ನು ಅಪ್ಲೋಡ್ ಮಾಡದ ಕಾರಣದಿಂದಾಗಿ ಕಡಿಮೆ ಹಾಜರಾತಿಯೆಂದು ತೋರಿಸುತ್ತಿದೆ. ಈ ಸಂಬಂಧ ಆ ಶಾಲೆಗಳ ವಿರುದ್ಧ ಕ್ರಮಕ್ಕೆ ಆದೇಶಿಸಲಾಗುವುದು. ರಾಜ್ಯಾದ್ಯಂತ ಹಲವು ಜಿಲ್ಲೆಗಳು ಶೇ. 90 ರಷ್ಟು ಹಾಜರಾತಿಯನ್ನು ಹೊಂದಿವೆ ಎಂದು ಹೇಳಿದರು.
ದಸರಾ ರಜೆ ಬಳಿಕ 1-5 ನೇ ತರಗತಿ ಆರಂಭ:
ಇನ್ನು ಕೊರೊನಾ ಹಿನ್ನೆಲೆಯಲ್ಲಿ ಪ್ರಾಥಮಿಕ ತರಗತಿ ಆರಂಭವಾಗಿಲ್ಲ. ಹೀಗಾಗಿ, ದಸರಾ ರಜೆ ಮುಗಿದ ಬಳಿಕ ಸಿಎಂ ಬಸವರಾಜ ಬೊಮ್ಮಯಿ ಅವರೊಂದಿಗೆ ಸಭೆ ನಡೆಸಿ ಶಾಲಾರಂಭದ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ. ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಸೂಚಿಸಿದರೆ 1-5 ನೇ ತರಗತಿ ಆರಂಭಿಸಲು ತಯಾರಿ ಸಹ ಮಾಡಿಕೊಂಡಿರುವುದಾಗಿ ಶಿಕ್ಷಣ ಸಚಿವರು ತಿಳಿಸಿದರು.