ಬೆಂಗಳೂರು: ಬಿಸಿಯೂಟ ನೌಕರರ ಸಂಭಾವನೆಯ ಕೇಂದ್ರದ ಪಾಲನ್ನು ಹೆಚ್ಚಿಸುವುದರ ಕುರಿತಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಸದ್ಯದಲ್ಲೇ ದೆಹಲಿಗೆ ನಿಯೋಗ ಕರೆದೊಯ್ಯಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಶಿಕ್ಷಣ ಇಲಾಖೆಯ ಮಧ್ಯಾಹ್ನ ಉಪಹಾರ ಯೋಜನೆಯ ಬಿಸಿಯೂಟ ನೌಕರರ ಬೇಡಿಕೆಗಳ ಕುರಿತು ವಿವಿಧ ಬಿಸಿಯೂಟ ನೌಕರರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಇಂದು ಸಮಗ್ರ ಶಿಕ್ಷಣ ಅಭಿಯಾನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಮಕ್ಕಳಿಗೆ ಬಿಸಿಯೂಟ ತಯಾರು ಮಾಡುವ ಸಿಬ್ಬಂದಿ ಬೇಡಿಕೆಗಳ ಕುರಿತಂತೆ ಸರ್ಕಾರ ಮುಕ್ತ ಮನಸ್ಸು ಹೊಂದಿದ್ದು, ಹಂತ ಹಂತವಾಗಿ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಧ್ಯಾಹ್ನ ಉಪಹಾರ ಯೋಜನೆ ನೌಕರರಿಗೆ ನಿವೃತ್ತಿ ನಂತರ ಒಂದಷ್ಟು ಮೊತ್ತದ ಹಣ ಬರುವಂತಾಗಲೂ ಹಾಗೆಯೇ ಅಪಘಾತ ವಿಮೆಯಂತಹ ಯೋಜನೆಯನ್ನು ಜಾರಿಗೊಳಿಸಲು ನೌಕರರ ಪ್ರೀಮಿಯಂ ಪಾವತಿಯೊಂದಿಗೆ ವಿಮೆ ಮಾಡುವ ಸಂಬಂಧದಲ್ಲಿ ಭಾರತೀಯ ಜೀವ ವಿಮಾ ನಿಗಮದೊಂದಿಗೆ ಚರ್ಚಿಸಿ ಸೂಕ್ತವೆನಿಸಬಹುದಾದ ನಿಟ್ಟಿನಲ್ಲಿ ಪರಿಶೀಲನೆ ಮಾಡಲಾಗುವುದು. ರಾಜ್ಯದ ಸರ್ಕಾರಿ ನೌಕರರರಿಗೆ ತುಟ್ಟಿ ಭತ್ಯೆ ಹೆಚ್ಚಳವಾದಾಗ ಗುತ್ತಿಗೆ ನೌಕರರಿಗೂ ಅದು ಅನ್ವಯವಾಗುವಂತೆ ತಮಿಳುನಾಡು ಸರ್ಕಾರ ಜಾರಿಗೊಳಿಸಿರುವ ನೀತಿಯನ್ನು ಅಧ್ಯಯನ ಮಾಡಿ ಆ ನಿಟ್ಟಿನಲ್ಲಿ ಬಿಸಿಯೂಟ ನೌಕರರಿಗೆ ಏನಾದರೂ ಸಹಾಯ ಮಾಡಲು ಸಾಧ್ಯವೇ ಎಂದು ಪರಿಶೀಲನೆ ನಡೆಸಲಾಗುವುದು ಎಂದೂ ಸುರೇಶ್ ಕುಮಾರ್ ತಿಳಿಸಿದರು.
ಶಾಲೆಗಳಲ್ಲಿ ಡಿ.ಗ್ರೂಪ್ ನೌಕರರು ಇಲ್ಲವಾದ್ದರಿಂದ ಬಿಸಿಯೂಟ ನೌಕರರನ್ನೇ ಡಿ.ಗ್ರೂಪ್ ನೌಕರರನ್ನಾಗಿ ನೇಮಿಸಿಕೊಳ್ಳಬೇಕು ಹಾಗೂ ಸ್ಥಳಾವಕಾಶವಿರುವ ಶಾಲೆಗಳಲ್ಲಿ ತೋಟಗಾರಿಕೆ ಕೈಗೊಳ್ಳಲು ನರೇಗಾ ಯೋಜನೆಯಡಿ ಬಿಸಿಯೂಟ ನೌಕರರನ್ನು ಬಳಸಿಕೊಳ್ಳಬೇಕು ಎಂಬ ಬೇಡಿಕೆಗಳ ಕುರಿತು ಸಂಬಂಧಿಸಿದವರೊಂದಿಗೆ ಚರ್ಚಿಸ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಬಿಸಿಯೂಟ ನೌಕರರಿಂದ ಸಂಬಂಧಿಸಿದ ಶಾಲೆಯ ಮಕ್ಕಳಿಗೆ ಮಾತ್ರವೇ ಅಡುಗೆ ತಯಾರಿಸಬೇಕೆಂಬುದನ್ನು ಹೊರತು ಪಡಿಸಿದ ಯಾವುದೇ ಕೆಲಸಗಳನ್ನು ಬಿಸಿಯೂಟ ನೌಕರರಿಂದ ಮಾಡಿಸಿಕೊಳ್ಳಬಾರದೆಂದು ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಲಾಗುವುದು. ಯಾವುದೇ ಶಾಲೆಯಲ್ಲಿ ಬಿಸಿಯೂಟ ತಯಾರು ಮಾಡುವುದನ್ನು ಹೊರತುಪಡಿಸಿ ಬೇರಾವುದೇ ಕೆಲಸ ಮಾಡಿಸಿದರೆ ಅಂತಹ ಶಾಲೆಗಳ ಮುಖ್ಯಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.