ಬೆಂಗಳೂರು: ಕೆನೆಡಾ ಸೇರಿದಂತೆ ವಿವಿಧ ದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಿರುದ್ಯೋಗಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬೊಮ್ಮಸಂದ್ರ ನಿವಾಸಿ ಅರುಣಾ ಎಂಬುವರು ನೀಡಿದ ದೂರಿನ ಮೇರೆಗೆ ಕಾನೂನುಬಾಹಿರವಾಗಿ ಸ್ಥಾಪಿಸಿದ್ದ ವಿ.ಆರ್.ವಿ.ವೆಂಚರ್ಸ್ ಕಂಪೆನಿಯ ಸಂಸ್ಥಾಪಕ ರಾಘವನ್ ಶ್ರೀನಿವಾಸ್ ಅಯ್ಯಂಗಾರ್ ಎಂಬಾತ ಪೊಲೀಸರಿಗೆ ಸೆರೆಸಿಕ್ಕಿದ್ದಾನೆ.
ಬಂಧಿತ ಆರೋಪಿ ಮುಂಬೈ ಹಾಗೂ ಹೈದರಾಬಾದ್ನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಬೆಂಗಳೂರಿನ ಬಸವನಗುಡಿಯಲ್ಲಿ ವಾಸ್ತವ್ಯ ಹೂಡಿದ್ದ. ಮೈಕ್ರೊಸಾಫ್ಟ್ ಕಂಪೆನಿಯ ಉದ್ಯೋಗಿ ಎಂದು ನಕಲಿ ಐಡಿಕಾರ್ಡ್ ಹಾಗೂ ವಿಸಿಟಿಂಗ್ ಮಾಡಿಸಿಕೊಂಡಿದ್ದ. ಇದೇ ಸೋಗಿನಲ್ಲಿ ಅನಧಿಕೃತವಾಗಿ ವಿಆರ್ ವಿ ವೆಂಚರ್ಸ್ ಹಾಗೂ ಮ್ಯಾನ್ಟಾವರ್ ಸಾಫ್ಟ್‌ವೇರ್ ಕನ್ಸಲ್‌ಟೆಂಟ್ ಸ್ಥಾಪಿಸಿದ್ದ. ಯಶವಂತಪುರ ವರ್ಲ್ಡ್ ಟ್ರೇಡ್ ಸೆಂಟರ್ ಕಚೇರಿ ತೆರೆದಿದ್ದ. ಕೆಲ ದಿನಗಳ ಬಳಿಕ ಬಾಡಿಗೆ ಕಟ್ಟಲಾಗದೆ ಖಾಲಿ ಮಾಡಿ ಇಂದಿರಾನಗರಕ್ಕೆ ಕಚೇರಿ ಶಿಫ್ಟ್ ಮಾಡಿದ್ದ. ಈ ಕಂಪೆನಿಗೆ ತನ್ನ ಸಹಚರಗಳನ್ನು ನಿರ್ದೇಶಕರಾಗಿ ಮಾಡಿದ್ದ.
ವಿದೇಶದಲ್ಲಿ ಕೆಲಸ ಮಾಡುವ ಆಸೆ ಹೊಂದಿರುವವರನ್ನು ಗುರಿಯಾಗಿಸಿಕೊಂಡು, ಆ ಕಂಪೆನಿಗಳ ನಿರ್ದೇಶಕರ ಮುಖಾಂತರ ದೇಶ- ವಿದೇಶಗಳ ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಕೊಡಿಸುವುದಾಗಿ ಉದ್ಯೋಗಾಂಕ್ಷಿಗಳಿಗೆ ಭರವಸೆ ನೀಡುತ್ತಿದ್ದ. ಕೆನಾಡದ ಐಬಿಎಂ, ವೊಲ್ಟೊ ಕಂಪೆನಿಗಳ ಹೆಸರಿನಲ್ಲಿ ನಕಲಿ ಆಫರ್ ಲೆಟರ್ ಇ-ಮೇಲ್ ಮಾಡಿ ನಿರುದ್ಯೋಗಿಗಳಿಗೆ ಕೆಲಸ ದೊರೆಯುತ್ತಿರುವುದಾಗಿ ನಂಬಿಸುತ್ತಿದ್ದ. ಇದನ್ನು ನೋಡಿದ ಹಲವು ನಿರುದ್ಯೋಗಿಗಳು ವಿದೇಶಗಳಲ್ಲಿ ಕೆಲಸ ಮಾಡುವ ಸಲುವಾಗಿ 2 ಲಕ್ಷಕ್ಕೂ ಹೆಚ್ಚು ಮೊತ್ತದ ಹಣ ನೀಡುತ್ತಿದ್ದರು.
ಆದರೆ ಆಫರ್ ಲೆಟರ್ ನೋಡಿ ವಿದೇಶದಲ್ಲಿ ಜಾಬ್ ಸಿಕ್ಕಿ ಲೈಫ್ ಸೆಟಲ್ ಅಂದುಕೊಂಡಿದ್ದ ನಿರುದ್ಯೋಗಿಗಳಿಗೆ ವಂಚಕರ ಬಣ್ಣ ಬಯಲಾಗುತ್ತಿದ್ದಂತೆ ಶಾಕ್ ಆಗಿದೆ. ಹಣ ಕಳೆದುಕೊಂಡು ಕಂಗಾಲಾಗಿ ಪೊಲೀಸರ ಮೊರೆ ಹೋಗಿದ್ದಾರೆ.ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿರುವುದಾಗಿ ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.
30-40 ಉದ್ಯೋಗಿಗಳಿಗೆ ವಂಚನೆ:
ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಾಲ್ವರಿಗೆ ನಕಲಿ ನೇಮಕಾತಿ ಪತ್ರ ನೀಡಿ ಸುಮಾರು 20 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ ರಾಘವನ್ ಶ್ರೀನಿವಾಸ್ ಅಯ್ಯಾಂಗಾರ್ ಹಾಗೂ ಅವನ ಸಹಚರರು. ಇನ್ನೂ ಕೆಲವರಿಗೆ ಆಫರ್ ಲೆಟರ್ ಕಳುಹಿಸುವುದಾಗಿ ನಂಬಿಸಿ ಹಣ ಪಡೆದಿದ್ದಾರೆ. ಹಣ ನೀಡಿದರೂ ಆಫರ್ ಲೆಟರ್ ಬರದಿರುವುದನ್ನು ಕಂಡು, ಹಣ ಕೊಟ್ಟವರು ಆರೋಪಿಗಳನ್ನು ಸಂಪರ್ಕಿಸಿದಾಗ ಕೊರೊನಾದಿಂದ ಜಾಯ್ನಿಂಗ್ ಲೆಟರ್ ಕಳುಹಿಸಲು ತಡವಾಗಿದೆ ಎಂದು ಸಮಜಾಯಿಷಿ ನೀಡಿದ್ದರು. ಇದುವರೆಗೂ ಸುಮಾರು 30-40 ಜನರಿಂದ ಲಕ್ಷಾಂತರ ರೂಪಾಯಿ ವಂಚಿಸಿರುವುದಾಗಿ ತಿಳಿದು ಬಂದಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆಸಿರುವುದಾಗಿ ಡಿಸಿಪಿ ಮಾಹಿತಿ ನೀಡಿದ್ದಾರೆ.