ಬೆಂಗಳೂರು : ರಾಜ್ಯ ಬಿಎಂಆರ್ಸಿಎಲ್ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ನಗರದಲ್ಲಿ ಮತ್ತೊಂದು ಮಾರ್ಗದಲ್ಲಿ ಮೆಟ್ರೋ ಓಡಾಟಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಬೆಂಗಳೂರಿನಲ್ಲಿ ಮತ್ತೊಂದು ಮಾರ್ಗದಲ್ಲಿ ವಾಣಿಜ್ಯ ಸಂಚಾರಕ್ಕೆ ಇದೀಗ ಮುಹೂರ್ತ ನಿಗದಿಯಾಗಿದೆ. ಜ.15 ರಿಂದ ಯಲಚೇನಹಳ್ಳಿ- ಅಂಜನಾಪುರ ಮಾರ್ಗದಲ್ಲಿ ಮೆಟ್ರೋ ಓಡಾಟ ಆರಂಭವಾಗಲಿದ್ದು, ಜ.14 ರಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೊಸ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ.
ಕಳೆದ ಮೂರು ತಿಂಗಳಿಂದ ಪರೀಕ್ಷಾರ್ಥ ಸಂಚಾರ ನಡೆಯುತ್ತಿತ್ತು. ಇದೀಗ ಕೇಂದ್ರದ ರೈಲ್ವೆ ಸುರಕ್ಷತೆ ಆಯುಕ್ತರು ಭೇಟಿ ನೀಡಿ ವಾಣಿಜ್ಯ ಸಂಚಾರ ಆರಂಭಕ್ಕೆ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮೆಟ್ರೋ 2ನೇ ಹಂತದ ರೀಚ್-4 ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಓದಿ: ಶೀಘ್ರದಲ್ಲೇ ಮತ್ತೊಂದು ಮಾರ್ಗದಲ್ಲಿ ಮೆಟ್ರೋ ರೈಲು ಓಡಾಟ ಆರಂಭ
ಸದ್ಯ ಯಲಚೇನಹಳ್ಳಿ- ಅಂಜನಾಪುರ ಮಾರ್ಗದಲ್ಲಿ ಕಾಮಗಾರಿ ಮುಗಿಸಿರುವ ಬಿಎಂಆರ್ಸಿಎಲ್ ಜ.15 ರಿಂದ 6.29 ಕಿಮೀ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭಿಸಲಿದೆ. 72 ಕಿಮೀ ನ 2ನೇ ಹಂತದ ಮೊದಲ ಮಾರ್ಗಕ್ಕೆ ಸರ್ಕಾರ ಅವಕಾಶ ನೀಡಿದೆ. ಕೋಣನಕುಂಟೆ, ದೊಡ್ಡ ಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಹಾಗೂ ಅಂಜನಾಪುರ ಮಾರ್ಗದಲ್ಲಿ ಮೆಟ್ರೋ ಓಡಾಟ ನಡೆಸಲಿದೆ.