ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅವಾಂತರ ನಡೆದಿದೆ. ಫೇಸ್ -2 ಕಾಮಗಾರಿ ವೇಳೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಮೆಟ್ರೋ ಸೆಗ್ಮೆಂಟ್ಸ್ ಜೋಡಿಸುವ ಮಷಿನ್ ಅರ್ಧಕ್ಕೆ ಕಟ್ ಆಗಿ ನಲವತ್ತು ಅಡಿ ಎತ್ತರದಿಂದ ಕ್ರೇನ್ ಕೆಳಗೆ ಬಿದ್ದಿದೆ.
ಈ ಘಟನೆ ಸಿಲ್ಕ್ ಬೋರ್ಡ್ ಬಳಿ ನಡೆದಿದೆ. ಬೆಳಗ್ಗೆ 6:30 ರ ವೇಳೆಗೆ ಆಯತಪ್ಪಿ ಸೆಗ್ಮೆಂಟ್ ಜೋಡಿಸುವ ಯಂತ್ರ ಕೆಳಗೆ ಬಿದ್ದಿದೆ ಎಂಬುದು ತಿಳಿದುಬಂದಿದೆ. ಅಸಂಬಲ್ ಜೋಡಿಸುವ ವೇಳೆ ಈ ಘಟನೆ ನಡೆದಿದೆ. ಅದೃಷ್ಟವಶಾತ್ ನೂರಾರು ಮೆಟ್ರೋ ಕಾರ್ಮಿಕರು ಪಾರಾಗಿದ್ದಾರೆ.
ಕೆಳಗೆ ಬಿದ್ದಿರುವ ಮಷಿನ್ ಅನ್ನು ಮೇಲೆತ್ತಲು ಕಾರ್ಮಿಕರು ಹರಸಾಹಸ ಪಡುತ್ತಿದ್ದರೂ ಸ್ಥಳಕ್ಕೆ ಮೆಟ್ರೋ ಅಧಿಕಾರಿಗಳು ಬಂದಿಲ್ಲ. ಘಟನೆ ನಡೆದು ಆರು ಗಂಟೆ ಕಳೆದ್ರೂ ಸ್ಥಳದಲ್ಲಿ ಯಾವೊಬ್ಬ ಮೆಟ್ರೋ ಅಧಿಕಾರಿಗಳು ಬಂದಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಘಟನೆ ಸಂಭವಿಸಿದ್ದು ಹೇಗೆ ಎಂಬುದರ ಬಗ್ಗೆ ನಮ್ಮ ಮೆಟ್ರೋ ವತಿಯಿಂದ ಸ್ಪಷ್ಟನೆ ನೀಡಲಾಗಿದೆ. ಇಂದು ಬೆಳಗ್ಗೆ 6.15 ಗಂಟೆಯ ಸಮಯದಲ್ಲಿ ಬಿಟಿಎಂ ಲೇಔಟ್, 2ನೇ ಸ್ಟೇಜ್‌ನ ಉಡುಪಿ ಗಾರ್ಡನ್ ಸಿಗ್ನಲ್ ಬಳಿ ಲಾಂಚಿಂಗ್ ಗರ್ಡರ್, ಸ್ವಯಂ ಆಟೋ ಲಾಂಚ್ ಮಾಡುವ ಕಾಮಗಾರಿ ಸಂದರ್ಭದಲ್ಲಿ ಸ್ವಂತ ಬೆಂಬಲವನ್ನು ತೆಗೆದುಕೊಳ್ಳುವ ಬದಲು ಪಿಯರ್ ಮೇಲೆ ಬೆಂಬಲ ಪಡೆದಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಯಾಂತ್ರಿಕ ವೈಫಲ್ಯದಿಂದ ಈ ಅವಘಡ ನಡೆದಿದೆ ಎಂದು ಹೇಳಲಾಗಿದೆ. ಅದೃಷ್ಟವಶಾತ್ ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೇ, ಲಾಂಚಿಂಗ್ ಗರ್ಡರ್ ಅನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಕಾಂಟ್ರಾಕ್ಟ್ ಒಪ್ಪಂದದ ನಿಬಂಧನೆಗಳ ಪ್ರಕಾರ, ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಓದಿ: ಬೆಂಗಳೂರು: ಪ್ರಿಯತಮೆ ಕೈಕೊಟ್ಟಳು ಅಂತ ನೊಂದ ಜಿಮ್ ಟ್ರೈನರ್ ಆತ್ಮಹತ್ಯೆಗೆ ಶರಣು