ಬೆಂಗಳೂರು: ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ವಿಚಾರವಾಗಿ, ಮಾಜಿ ಸಚಿವ ಹೆಚ್. ಆಂಜನೇಯ ಹಾಗೂ ಸಂಸದ ನಾರಾಯಣಸ್ವಾಮಿ ನೇತೃತ್ವದಲ್ಲಿ ಇಂದು ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ಮಾದಿಗ ಸಮುದಾಯದ ಜನ ಪ್ರತಿನಿಧಿಗಳ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಹೆಚ್. ಆಂಜನೇಯ, ರಾಜ್ಯ ಸರ್ಕಾರ ಕೂಡಲೇ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಬೇಕೆಂದು ಒತ್ತಾಯಿಸಿದರು.
ಇನ್ನು ಸಂಸದ ನಾರಾಯಣಸ್ವಾಮಿ ಮಾತನಾಡಿ, ನಮ್ಮ ಸಮುದಾಯದ ನಮ್ಮ ಸಮಪಾಲನ್ನು ಪಡೆಯಲು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು
- ಸೆಪ್ಟೆಂಬರ್ 21 ರಂದು ಪ್ರಾರಂಭವಾಗುವ ವಿಧಾನ ಸಭೆಯ ಅಧಿವೇಶನದಲ್ಲಿ, ಸದಾಶಿವ ಆಯೋಗದ ವರದಿಯನ್ನು ಮಂಡಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಲು ಒತ್ತಾಯಿಸಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲು ತೀರ್ಮಾನ.
- ಈ ಹೋರಾಟಕ್ಕೆ ಪೂರಕವಾಗಿ ಬಲಗೈ ಸಮುದಾಯ ಪ್ರಮುಖ ನಾಯಕರಾದ ಮಾನ್ಯ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್, ಶ್ರೀನಿವಾಸ್ ಪ್ರಸಾದ್ ಹಾಗೂ ಹೆಚ್.ಸಿ. ಮಹದೇವಪ್ಪ ಅವರನ್ನು ಭೇಟಿಯಾಗಿ ಹೋರಾಟಕ್ಕೆ ಬೆಂಬಲಿಸುವುದರ ಜೊತೆಗೆ ವರದಿಯನ್ನು ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಾಯಿಸುವಂತೆ ಮನವಿ ಮಾಡಲು ತೀರ್ಮಾನ.
- ದಲಿತ ಸಂಘಟನೆ ಹೋರಾಟಗಾರರು ಹಾಗೂ ಒಳ ಮೀಸಲಾತಿ ಹೋರಾಟದಲ್ಲಿನ ಮುಂಚೂಣಿ ನಾಯಕರು ಈ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ವಿನಂತಿ.
- ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಮುದಾಯದ ಎಲ್ಲಾ ಮಠಾಧೀಶರನ್ನು ನಿಯೋಗದಲ್ಲಿ ಕರೆದೊಯ್ಯುಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಶಾಸಕರಾದ ದುರ್ಯೋಧನ ಐಹೊಳೆ, ಬಸವರಾಜ ಮತ್ತಿಮಡ್, ಪ್ರೊ.ಲಿಂಗಣ್ಣ, ವಿಧಾನ ಪರಿಷತ್ತಿನ ಸದಸ್ಯರಾದ ಧರ್ಮಸೇನಾ, ಮಾಜಿ ಸಚಿವರಾದ ಎಂ.ಶಿವಣ್ಣ, ಮಾಜಿ ವಿಧಾನಸಭೆಯ ಸದಸ್ಯರಾದ ಆರ್.ರಾಮಕೃಷ್ಣ, ಗಂಗಹನುಮಯ್ಯ ಮತ್ತು ಅನುಸೂಯಮ್ಮ ಹಾಗೂ ಸಮುದಾಯದ ಹೋರಾಟಗಾರರು ಭಾಗವಹಿಸಿದ್ದರು.