ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ನಡೆದ ಅತೃಪ್ತ ಶಾಸಕರ ಸಭೆ ವಿಫಲವಾಗಿದೆ. ಡಿಕೆಶಿ, ರಾಮಲಿಂಗಾರೆಡ್ಡಿ ಅವರಿಗೆ ಮಂತ್ರಿ ಸ್ಥಾನದ ಆಫರ್ ನೀಡುವುದಾಗಿ ಆಮಿಷವೊಡ್ಡಿದರೂ ಇದನ್ನುರೆಡ್ಡಿ ನಯವಾಗಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಶಾಸಕರಾದ ರಾಮಲಿಂಗಾರೆಡ್ಡಿ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ ಅವರನ್ನು ತಮ್ಮ ನಿವಾಸಕ್ಕೆ ಕರೆತಂದ ಡಿ.ಕೆ.ಶಿವಕುಮಾರ್ ಸಂಧಾನಕ್ಕೆ ನಡೆಸಿದ ಯತ್ನ ಫಲ ಕೊಟ್ಟಿಲ್ಲ. ವಿಧಾನಸೌಧದಿಂದ ಅವರನ್ನೆಲ್ಲ ನೇರ ತಮ್ಮ ಸರ್ಕಾರಿ ನಿವಾಸಕ್ಕೆ ಕರೆದುಕೊಂಡು ಬಂದ ಡಿ.ಕೆ.ಶಿವಕುಮಾರ್, ಅವರ ಮನವೊಲಿಸಲು ಯತ್ನಿಸಿದರು. ಆದರೆ, ಮುನಿರತ್ನ ಹಾಗೂ ಇತರೆ ಶಾಸಕರು ಮರಳಿ ಸ್ಪೀಕರ್ ಕಚೇರಿಗೆ ತೆರಳಿ ಮತ್ತೆ ರಾಜೀನಾಮೆ ಪತ್ರ ಸಲ್ಲಿಸಿ ರಾಜಭವನಕ್ಕೆ ತೆರಳಿದ್ದು, ಕಾಂಗ್ರೆಸ್ ಮಾಸ್ಟರ್ ಮೈಂಡ್ ಪ್ರಯತ್ನಕ್ಕೆ ಸಫಲತೆ ಸಿಕ್ಕಿಲ್ಲ.
ರಾಜೀನಾಮೆ ಹಿಂಪಡೆಯುವ ಮಾತೇ ಇಲ್ಲ:
ಡಿಕೆಶಿ ನಿವಾಸದಿಂದ ತೆರಳಿದ ಮುನಿರತ್ನ, ಎಲ್ಲ ನಮ್ಮ ನಾಯಕ ರಾಮಲಿಂಗಾರೆಡ್ಡಿ ಮಾತನಾಡಿದ್ದಾರೆ ಎಂದು ಹೇಳಿದರು. ಇನ್ನು ಈ ಬಗ್ಗೆ ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ನನ್ನ ರಾಜೀನಾಮೆ ಕಾರಣ ಮಾಧ್ಯಮಗಳಿಗೆ ಈಗಾಗಲೇ ಗೊತ್ತಿದೆ. ನಾನು ಅತೃಪ್ತರ ಗುಂಪಿನಲ್ಲಿ ಇಲ್ಲ. ನಾನು ಒಬ್ಬಂಟಿಯಾಗಿ ರಾಜೀನಾಮೆ ಕೊಟ್ಟಿದ್ದೇನೆ. ಅಷ್ಟೇ ಅಲ್ಲದೆ, ನಾನು ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆಯುವ ಮಾತೇ ಇಲ್ಲ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
ಪ್ರಮುಖರ ಆಗಮನ:
ಅತೃಪ್ತ ನಾಯಕರು ತೆರಳಿದ ನಂತರ ಮಾಜಿ ಶಾಸಕ ಅಶೋಕ್ ಖೇಣಿ ಹಾಗೂ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಆಗಮಿಸಿ ಡಿಕೆಶಿ ಜೊತೆ ಸಮಾಲೋಚಿಸಿದರು.
ಮಂತ್ರಿ ಸ್ಥಾನದ ಆಫರ್ಅನ್ನೂ ನಯವಾಗಿ ತಿರಸ್ಕರಿಸಿದ ರೆಡ್ಡಿ:
ಡಿಕೆಶಿ, ರಾಮಲಿಂಗಾರೆಡ್ಡಿ ಅವರಿಗೆ ಮಂತ್ರಿ ಸ್ಥಾನದ ಆಫರ್ ನೀಡುವುದಾಗಿ ಆಮಿಷವೊಡ್ಡಿದರೂ ಇದನ್ನು ರೆಡ್ಡಿ ನಯವಾಗಿ ತಿರಸ್ಕರಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರೆಡ್ಡಿ, ಡಿಕೆಶಿ ಅವರು ಪಕ್ಷ ಬಿಡಬೇಡಿ ಎಂದು ಕೇಳಿಕೊಂಡಿದ್ದಾರೆ. ಹೀಗಾಗಿ, ನಾನು ಪಕ್ಷದಲ್ಲೇ ಉಳಿಯುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯಲ್ಲ. ನನ್ನ ನಿರ್ಧಾರ ಬದಲಾಯಿಸುವ ಪ್ರಶ್ನೆಯೇ ಇಲ್ಲ. ಮುಂದಿನ ಬೆಳವಣಿಗೆಯನ್ನು ಕಾದು ನೋಡಿ ಎಂದು ಕುತೂಹಲ ಕೆರಳಿಸಿ ಹೊರ ನಡೆದರು.