ಬೆಂಗಳೂರು: ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ ಬೆಂಗಳೂರು ನಗರ ವ್ಯಾಪ್ತಿಯ ಕಾಂಗ್ರೆಸ್ ನಾಯಕರಿಂದ ವ್ಯಕ್ತವಾಗಿದೆ.
ಕೆಪಿಸಿಸಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರೆಹಮಾನ್ ಷರೀಫ್, ನಾನು ಶಿವಾಜಿನಗರ ಉಪಚುನಾವಣೆ ಆಕಾಂಕ್ಷಿ. ನಮ್ಮ ತಾತ ಹಿಂದಿನಿಂದಲೂ ಕ್ಷೇತ್ರದಲ್ಲಿ ಪರಿಚಿತರಿದ್ದಾರೆ. ಸರ್ಕಾರದ ಮೇಲೆ ಜನರಿಗೆ ವಿರುದ್ಧ ಭಾವನೆಯಿದೆ. ಇದೇ ವೇಳೆ ಶಿವಾಜಿನಗರಕ್ಕೆ ಉಪಚುನಾವಣೆ ಬಂದಿದೆ. ನಾನು ಈ ಕ್ಷೇತ್ರದ ಪ್ರಬಲ ಆಕಾಂಕ್ಷಿ. ನನಗೆ ಟಿಕೆಟ್ ಸಿಕ್ಕರೆ ಕಾಂಗ್ರೆಸ್ಗೆ ಗೆಲುವು ನಿಶ್ಚಿತ. ಹಿರಿಯ ನಾಯಕರ ಭರವಸೆಯೂ ನನಗಿದೆ ಎಂದರು.
ಅಭಿಪ್ರಾಯ ಸಂಗ್ರಹಿಸಿದ್ದಾರೆ:
ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಉಪಚುನಾವಣೆಗೆ ನಾವು ರೆಡಿಯಿದ್ದೇವೆ. 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಇಂದು ನಾವು ಮುಖಂಡರ ಸಭೆ ನಡೆಸಿದ್ದೇವೆ. ಬೆಳಗಾವಿ ಪ್ರತಿಭಟನೆ ನಂತರ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಚುನಾವಣಾ ಕಮಿಟಿ ಮೀಟಿಂಗ್ ಮಾಡುತ್ತೇವೆ. ಅಲ್ಲಿನ ಚರ್ಚೆ ಬಳಿಕ ತೀರ್ಮಾನ ಮಾಡುತ್ತೇವೆ ಎಂದರು.
ಸಭೆ ಮುಕ್ತಾಯ:
ಕೆಪಿಸಿಸಿ ಕಚೇರಿಯಲ್ಲಿ ನಡೆದ 15 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಂಬಂಧ ಸಭೆ ಮುಕ್ತಾಯವಾಗಿದ್ದು, ಸಭೆಯ ಚರ್ಚೆಯ ಕುರಿತ ಮಾಹಿತಿ ನಾಯಕರು ನೀಡಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್, ಮಾಜಿ ಸಚಿವ ಚೆಲುವರಾಯಸ್ವಾಮಿ ಮುಂತಾದ ನಾಯಕರು ಸಭೆ ಮುಗಿಸಿ ತೆರಳುವ ಮುನ್ನ ಮಾತನಾಡದೆ ಹೊರನಡೆದರು.