ಬೆಂಗಳೂರು: ಮಿಷನ್ ಇಂದ್ರಧನುಷ್ 5.0 (IMI 5,0) ಕಾರ್ಯಕ್ರಮದಡಿ 5 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ದಡಾರ ಮತ್ತು ರುಬೆಲ್ಲಾ ಲಸಿಕೆ ಅಭಿಯಾನವನ್ನು ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಸೌಧದಲ್ಲಿ ಶನಿವಾರ ಸಂಜೆ ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, ರಾಯಚೂರಿನಲ್ಲಿ ಆಗಸ್ಟ್ 7 ರಂದು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿನ ಎಲ್ಲಾ ಲಸಿಕೆಗಳನ್ನು ನೀಡಿ ಅವುಗಳ ಪ್ರಗತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. 2023 ರ ವೇಳೆಗೆ ದಡಾರ ಮತ್ತು ರುಬೆಲ್ಲಾವನ್ನು ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5,0 (IMI 5.0) ಮೂಲಕ ನಿರ್ಮೂಲನ ಮಾಡುವ ಅಂತಿಮ ಉದ್ದೇಶ ಹೊಂದಿದೆ. ಕೊಳೆಗೇರಿಗಳು, ನಗರದ ಹೊರವಲಯ ಪ್ರದೇಶಗಳು, ಅಲೆಮಾರಿಗಳು, ಇಟ್ಟಿಗೆ ಗೂಡು/ನಿರ್ಮಾಣ ಸ್ಥಳಗಳು ಮತ್ತು ಇತರ ಹೆಚ್ಚಿನ ಅಪಾಯದಂಚಿನ ಪ್ರದೇಶಗಳ (ಮೀನುಗಾರರ ಹಳ್ಳಿಗಳು, ಚಹಾ/ಕಾಫಿ ಎಸ್ಟೇಟ್‌ಗಳಲ್ಲಿ ವಲಸೆ ಬಂದವರು ಇತ್ಯಾದಿ) 0-5 ವರ್ಷದ ಮಕ್ಕಳು ಮತ್ತು ಗರ್ಭಿಣಿಯರನ್ನು ಮುಖ್ಯವಾಗಿ ಕೇಂದ್ರೀಕರಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ 1,65,177 ಮಂದಿ ಲಸಿಕೆ ಪಡೆಯದ/ಬಿಟ್ಟು ಹೋದ ಮತ್ತು ಲಸಿಕಾಕರಣಕ್ಕೆ, ಬಾಕಿ ಇರುವ ಮಕ್ಕಳು ಮತ್ತು 32,917 ಗರ್ಭಿಣಿ ಮಹಿಳೆಯರಿಗೆ ಲಸಿಕೆ ಬಾಕಿ ಇದೆ. ಹಾಗಾಗಿ, ರಾಜ್ಯಾದ್ಯಂತ 6 ಕೆಲಸದ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಮೂರು ಸುತ್ತುಗಳಲ್ಲಿ ಲಸಿಕೆ ಕಾರ್ಯಕ್ರಮ ನಡೆಸಲಾಗುವುದು. ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ 2023 (7-12 ಆಗಸ್ಟ್ 11-16 ಸೆಪ್ಟೆಂಬರ್, ಮತ್ತು 9-14 ಅಕ್ಟೋಬರ್) ತಿಂಗಳುಗಳಿಗೆ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.
ಹೆಡ್‌ಕೌಂಟ್ ಸಮೀಕ್ಷೆಯ ಮಾಹಿತಿಯು ಲಸಿಕಾಕರಣ ನಡೆಸಲು ಬೇಸ್ ಆಗಿರುತ್ತದೆ ಮತ್ತು ಫಲಾನುಭವಿಗಳನ್ನು ಯು-ವಿನ್‌ನಲ್ಲಿ ಮೊದಲೇ ನೋಂದಾಯಿಸಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಸಭೆಗಳು, ತರಬೇತಿಗಳು, ಹೆಡ್‌ಕೌಂಟ್ ಸಮೀಕ್ಷೆಗಳು, ಸೂಕ್ತ ಕ್ರಿಯಾ ಯೋಜನೆ ತಯಾರಿ ಮತ್ತು U-WIN ನೋಂದಣಿಯಂತಹ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.) (IMI 50) ಗೆ ಸಂಬಂಧಪಟ್ಟ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಬಲಪಡಿಸಲು ಜಿಲ್ಲಾವಾರು ಅಪಾಯದ ಜಿಲ್ಲೆಯ ವರ್ಗೀಕರಣ ಮಾಡಲಾಗಿದೆ. ಹೆಚ್ಚಿನ ಅಪಾಯದ ಜಿಲ್ಲೆಗಳು ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ನಗರ, ಬೆಳಗಾವಿ, ದಕ್ಷಿಣ ಕನ್ನಡ, ಧಾರವಾಡ, ಕಲಬುರಗಿ, ಕೋಲಾರ, ಮೈಸೂರು, ರಾಯಚೂರು, ವಿಜಯಪುರ ಮತ್ತು ಯಾದಗಿರಿ. ಮಧ್ಯಮ-ಅಪಾಯದ ಜಿಲ್ಲೆಗಳು ಬೀದರ್, ದಾವಣಗೆರೆ, ಗದಗ, ಹಾಸನ, ಕೊಪ್ಪಳ, ರಾಮನಗರ, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಮತ್ತು ವಿಜಯನಗರ. ಕಡಿಮೆ ಅಪಾಯದ ಜಿಲ್ಲೆಗಳು ಬೆಂಗಳೂರು-ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ಕೊಡಗು, ಮಂಡ್ಯ ಮತ್ತು ಉಡುಪಿ ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.
ಕಲುಷಿತ ನೀರು ಸೇವಿಸಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ: ಇನ್ನು ಚಿತ್ರದುರ್ಗ ಜಿಲ್ಲೆಯ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ನಡೆದ ದುರಂತ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ 5 ಕುಟುಂಬದವರಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಮೂವರು ಕುಟುಂಬಸ್ಥರಿಗೆ 5 ಪರಿಹಾರದ ಚೆಕ್ ವಿತರಿಸಲಾಗಿದೆ. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಶ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದ್ದೇನೆ. ಸಂತ್ರಸ್ತರಿಗೆ ಅಗತ್ಯ ಆರೋಗ್ಯ ಸೇವೆ ನೀಡುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾ ಸರ್ಜನ್ ಡಾ. ಬಸವರಾಜ್ ಅವರ ವಿರುದ್ಧ ರೋಗಿಗಳು, ಸಂಬಂಧಿಕರಿಂದ ಸಾಕಷ್ಟು ದೂರು ಬಂದಿವೆ. ಹೆರಿಗೆ ವಾರ್ಡ್, ಎಕ್ಸರೇ ಸೇರಿ ಇತರೆಡೆ ವೈದ್ಯಕೀಯ ಸಿಬ್ಬಂದಿಯ ವಿರುದ್ಧ ಲಂಚ ವಸೂಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಬಸವರಾಜ್ ಅವರನ್ನು ಅಮಾನತುಗೊಳಿಸುವಂತೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಅಮಾನತು: ಡಾ. ಹೆಚ್.ಎಸ್. ಬಸವರಾಜು ಅವರನ್ನು ದೂರಿನ ಮೇರೆಗೆ ಸೇವೆಯಿಂದ ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಸದರಿ ಜಿಲ್ಲಾ ಶಸ್ತ್ರಚಿಕಿತ್ಸಕರು ಅಮಾನತುಗೊಂಡ ನಂತರ ಸದರಿ ಹುದ್ದೆಗೆ ಪ್ರಸ್ತುತ ಅದೇ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇವಾ ಹಿರಿತನ ಹೊಂದಿರುವ ಡಾ. ದೇವರಾಜ್.ಎಸ್.ಹೆಚ್, ಮಕ್ಕಳ ತಜ್ಞರನ್ನು ತಾತ್ಕಾಲಿಕವಾಗಿ ಪ್ರಭಾರವಾಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ: ಕುಮಾರಸ್ವಾಮಿಗೆ ವಿದೇಶದಲ್ಲಿ ವರ್ಗಾವಣೆ ಬಗ್ಗೆ ಮಾಹಿತಿ ಸಿಕ್ತಾ? ಸಚಿವ ಎಂ ಬಿ ಪಾಟೀಲ್