ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದ್ದು, ಅಂತಿಮ ಮತದಾರರ ಪಟ್ಟಿ ಸಿದ್ಧವಾಗಿದೆ. ಅದರ ಜೊತೆಗೆ ಪಾಲಿಕೆ ಆವರಣದಲ್ಲಿ ನಂಬರ್ ಗೇಮ್ ಆರಂಭವಾಗಿದ್ದು, ಲೆಕ್ಕಾಚಾರ ನಡೀತಿದೆ.
ಒಟ್ಟು ಮತದಾರರ ಸಂಖ್ಯೆ 257 ಇದ್ದು, ಅನರ್ಹ ಶಾಸಕರ ಹೆಸರು ಕೈಬಿಟ್ಟಿರುವುದರಿಂದ ಕಾಂಗ್ರೆಸ್ ಸಂಖ್ಯಾಬಲ ಕುಸಿದಿದೆ. ಅನರ್ಹ ಶಾಸಕರಲ್ಲಿ ಸುಮಾರು 20 ಜನ ಬೆಂಬಲಿಗರೂ ಕೂಡಾ ಚುನಾವಣೆ ದಿನ ಗೈರಾಗುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ಗೆ ಮೇಯರ್ ಪಟ್ಟ ಸಿಗೋದು ಡೌಟ್ ಎಂಬಂತಾಗಿದೆ. ಹೀಗಾಗಿಯೇ ಕಾಂಗ್ರೆಸ್ ಮೇಯರ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದ ಎಂ.ಶಿವರಾಜು ಕೂಡಾ ಹಿಂದೆ ಸರಿದಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್, ಜೆಡಿಎಸ್, ಪಕ್ಷೇತರರ ಒಟ್ಟು ಮತ ಸೇರಿ 131 ಆಗಲಿದೆ. ಬಿಜೆಪಿ ಬಲ ಒಬ್ಬರು ಪಕ್ಷೇತರರ ಮತ ಸೇರಿ 126 ಆಗಲಿದೆ. ಸದ್ಯಕ್ಕೆ ಕಾಂಗ್ರೆಸ್ ಬಲ ಹೆಚ್ಚೇ ಇದ್ದರೂ, ಪಕ್ಷೇತರರು ಈ ಬಾರಿ ಬಿಜೆಪಿ ಪಕ್ಷದ ಜೊತೆ ಕೈಜೋಡಿಸಲಿದ್ದಾರೆ. ಅಲ್ಲದೆ, ಕಾಂಗ್ರೆಸ್ ಅನರ್ಹ ಶಾಸಕರ ಸುಮಾರು ಇಪ್ಪತ್ತು ಬೆಂಬಲಿಗರೂ ಚುನಾವಣೆ ಸಮಯದಲ್ಲಿ ಗೈರಾಗುವ ಸಾಧ್ಯತೆ ಇದ್ದು, ಇದು ಬಿಜೆಪಿ ಪಕ್ಷಕ್ಕೆ ವರದಾನವಾಗಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, 257 ಒಟ್ಟು ಮತದಾರರು ಅಂದ್ರೂ ಕೂಡಾ ಕಾಂಗ್ರೆಸ್-ಜೆಡಿಎಸ್ ವಾಮಮಾರ್ಗದಿಂದ ಬೋಗಸ್ ಮತದಾರರನ್ನು ಸೇರಿಸುತ್ತದೆ. ನಾಲ್ಕು ವರ್ಷ ಅದನ್ನೇ ಮಾಡಿಕೊಂಡು ಬಂದಿದೆ. ಆದ್ರೆ ಈ ಬಾರಿ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಆಡಳಿತ ಪಕ್ಷದ ನಾಯಕ, ವಾಜಿದ್ ಮಾತನಾಡಿ ಮೈತ್ರಿ ಪಕ್ಷಕ್ಕೆ 131 ಸದಸ್ಯರು, ಬಿಜೆಪಿ 126 ಸದಸ್ಯರಿದ್ದಾರೆ. ಈಗಲೂ ಕಾಂಗ್ರೆಸ್ಗೇ ಹೆಚ್ಚಿನ ಸಂಖ್ಯಾಬಲ ಇರುವುದರಿಂದ ಮೈತ್ರಿಯಿಂದಲೇ ಮುಂದಿನ ಮೇಯರ್ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.