ಮೈಸೂರು: ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಸ್ಥಾನಗಳ ಚುನಾವಣೆಗೆ ಫೆ.24ಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ.
ಜ.17 ರಂದು ಹಾಲಿ ಮೇಯರ್ ತಸ್ನಿಂ ಹಾಗೂ ಉಪ ಮೇಯರ್ ಶ್ರೀಧರ್ ಅವರ ಅಧಿಕಾರದ ಅವಧಿಯು ಅಂತ್ಯವಾಗಿದ್ದು, ಫೆ. 24ರಂದು ನೂತನ ಮಹಾಪೌರರ ಆಯ್ಕೆ ನಡೆಯಲಿದೆ. ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿ ಡಾ.ಜಿ.ಸಿ. ಪ್ರಕಾಶ್ ಅವರು ಚುನಾವಣೆ ದಿನಾಂಕದ ಅಧಿಸೂಚನೆ ಹೊರಡಿಸಿದ್ದು, ಅಂದು ಬೆಳಗ್ಗೆ 11 ಗಂಟೆಗೆ ನಡೆಯುವ ವಿಶೇಷ ಸಭೆಯಲ್ಲಿ ಹಾಜರಿರುವಂತೆ ಸದಸ್ಯರಿಗೆ ಸಭಾಸೂಚನಾ ಪತ್ರಗಳನ್ನು ಕಳುಹಿಸಿದ್ದಾರೆ.
ಓದಿ: ಹಾಸನ RTO ಕಚೇರಿ ಮೇಲೆ 50ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ ದಾಳಿ
ಫೆ. 24ರಂದು ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ನಾಮಪತ್ರಗಳ ಸ್ವೀಕಾರ ನಡೆಯಲಿದೆ. ನಂತರ, 11 ಗಂಟೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ. ಮೇಯರ್ ಸ್ಥಾನವು ಸಾಮಾನ್ಯ ಮಹಿಳೆಗೆ ಹಾಗೂ ಉಪಮಹಾಪೌರ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಈ ಎರಡು ಸ್ಥಾನಗಳಿಗೆ ಚುನಾವಣೆ ನಡೆಯುವ ಜತೆಗೆ ನಾಲ್ಕು ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಯಲಿದೆ.