ಬೆಂಗಳೂರು: ಕೇಂದ್ರ ಸರ್ಕಾರ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಹಾಗೂ ಸಂರಕ್ಷಣೆಗಾಗಿ ಜಾರಿಗೆ ತಂದಿರುವ ನಿರ್ಭಯಾ ಯೋಜನೆಯಡಿ ರಾಜ್ಯಕ್ಕೆ 660 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿದೆ.
ಆದರೆ ಈ ಅನುದಾನ ಬಳಕೆಗೆ ಹಗ್ಗಜಗ್ಗಾಟ ಶುರುವಾಗಿದ್ದು, ಮೇಯರ್ ಗೌತಮ್ ಕುಮಾರ್ ಈ ಯೋಜನೆಗಳ ಅನುಷ್ಠಾನಕ್ಕೆ ಗೃಹ ಇಲಾಖೆಯ ಬದಲು ಪಾಲಿಕೆಗೆ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಆದ್ರೆ ಸದ್ಯ ಇದರ ಅನುಷ್ಠಾನದ ಹೊಣೆ ಗೃಹ ಇಲಾಖೆಯದ್ದಾಗಿದ್ದು, ಯಾವುದೇ ಕಾರ್ಯಕ್ರಮಗಳು ಅನುಷ್ಠಾನಗೊಂಡಿಲ್ಲ. ಬಿಬಿಎಂಪಿ ಕಲ್ಯಾಣ ಕಾರ್ಯಕ್ರಮಗಳ ಅಡಿ ಮಹಿಳೆಯರ ಏಳಿಗೆಗಾಗಿ ಹಾಗೂ ಮಹಿಳಾ ಸಂರಕ್ಷಣೆ ಹಿತದೃಷ್ಟಿಯಿಂದ ಅನೇಕ ವಾರ್ಡ್, ಶಾಲಾ-ಕಾಲೇಜು ಆವರಣಗಳಲ್ಲಿ ಕಲ್ಯಾಣ ಕಾರ್ಯಕ್ರಮಗಳ ಅಡಿಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವ ಕೆಲಸ ಮಾಡಿದೆ. ಶಂಕರಮಠ, ಗುರಪ್ಪನಪಾಳ್ಯ ವಾರ್ಡ್ಗಳಲ್ಲಿ ಈಗಾಗಲೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ, ಅವುಗಳ ನಿರ್ವಹಣೆಗೆ ಕೇಂದ್ರೀಕೃತ ಕೊಠಡಿಯನ್ನೂ ನಿರ್ಮಾಣ ಮಾಡಲಾಗಿದೆ. ಹೀಗೆ ಎಲ್ಲಾ ವಾರ್ಡ್ಗಳಲ್ಲೂ ಈ ಯೋಜನೆ ಜಾರಿಗೆ ತರಲು ಉದ್ದೇಶಿಸಿದ್ದು, ಹೆಚ್ಚಿನ ಅನುದಾನದ ಅಗತ್ಯ ಇರುವುದರಿಂದ ನಿರ್ಭಯಾ ಯೋಜನೆಯ ಅನುದಾನ ಕೊಡುವಂತೆ ಮೇಯರ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಪಾಲಿಕೆಯ ಹಿಂದಿನ ಆಯುಕ್ತರಾದ ಮಂಜುನಾಥ್ ಪ್ರಸಾದ್ ಈ ಯೋಜನೆಯ ಹಣ ಬಿಡುಗಡೆಗೆ ದೆಹಲಿಗೆ ಸಾಕಷ್ಟು ಬಾರಿ ಓಡಾಡಿದ್ದಾರೆ. ಹಿಂದಿನ ಡಿಸಿಎಂ ಪರಮೇಶ್ವರ್ ಬೆಂಗಳೂರು ಉಸ್ತುವಾರಿ ಹಾಗೂ ಗೃಹ ಇಲಾಖೆಯ ಸಚಿವರಾಗಿದ್ದರಿಂದ ಗೃಹ ಇಲಾಖೆಗೆ ಅನುದಾನ ನೀಡಿದ್ದರು.
ಆದ್ರೆ ಯಾವುದೇ ಕಾರ್ಯಕ್ರಮ ಕಾರ್ಯರೂಪಕ್ಕೆ ಬಂದಿಲ್ಲ. ತಾಂತ್ರಿಕ ತಂಡ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ಸ್ಗಳ ಕೊರತೆ ಇದೆ. ಹೀಗಾಗಿ ಎಲ್ಲಾ ವಾರ್ಡ್ಗಳ ಬಗ್ಗೆ ಪಾಲಿಕೆ ಸದಸ್ಯರಿಗೆ ಉತ್ತಮ ಮಾಹಿತಿ ಇದೆ. ಸೂಕ್ಷ್ಮ ಪ್ರದೇಶಗಳ ಬಗ್ಗೆ ಅರಿವಿದೆ. ಪಾಲಿಕೆ ಅಧಿಕಾರಿಗಳ ತಂಡದ ಮೂಲಕ ಯೋಜನೆ ಅನುಷ್ಠಾನ ಸುಲಭ. ಹೀಗಾಗಿ ಅನುದಾನ ನೀಡುವಂತೆ ಸಿಎಂಗೆ ಪತ್ರ ಬರೆದಿದ್ದೇನೆ. ನಾಳೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ ಎಂದರು.