ಬೆಂಗಳೂರು: ದೇಶದ ಯುವಕರಿಗೆ ಉದ್ಯೋಗ ಕೊಡಿ ಎಂದು ಆಗ್ರಹಿಸಿ ಇಂದು ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ರೋಜಗಾರ್ ದೋ ಹೆಸರಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ನಗರದ ಮೌರ್ಯ ವೃತ್ತದಿಂದ ಆನಂದರಾವ್ ವೃತ್ತದ ಮೇಲುರಸ್ತೆ ಮೂಲಕ ಸಾಗಿ, ರೇಸ್ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದವರೆಗೆ ಮೆರವಣಿಗೆ ನಡೆಸಿದರು. ಅಲ್ಲದೇ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರಧಾನಿಯವರೇ ಕೊಟ್ಟ ಮಾತು ಉಳಿಸಿಕೊಳ್ಳಿ. ಯುವಜನರಿಗೆ ಉದ್ಯೋಗ ನೀಡಿ, ಆತ್ಮಹತ್ಯೆ ನಿಲ್ಲಿಸಿ. ಮಾತು ಕೊಟ್ಟು ಮತ ಪಡೆದವರು ನೀವು. ಉದ್ಯೋಗವಿಲ್ಲದೆ ಹತಾಶರಾದ ಯುವಜನರು ನಾವು. ಯುವಕರಿಗೆ ಉದ್ಯೋಗ ಕೊಡಿ ಎಂದು ಆಗ್ರಹಿಸಿದ್ರು.
ಮಿಸ್ ಕಾಲ್ ನೀಡುವ ಮೂಲಕ ಅಭಿಯಾನದ ಪರ ಧ್ವನಿಯೆತ್ತಿ ಎಂದು ಕರೆಕೊಟ್ಟಿರುವ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್, ಕರ್ನಾಟಕದ ಮೂಲಕವೇ ಈ ಒಂದು ಬೃಹತ್ ಅಭಿಯಾನಕ್ಕೆ ಚಾಲನೆ ನೀಡಿದರು.
ಪ್ರತಿಭಟನೆ ಕೊನೆಗೊಂಡ ನಂತರ ಮಾತನಾಡಿದ ಶ್ರೀನಿವಾಸ್, ಯಾವ ಕಾರಣಕ್ಕೂ ಅಭಿಯಾನ ವಿಫಲಗೊಳ್ಳಬಾರದು, ಸಾಧ್ಯವಾದಷ್ಟು ಜನರನ್ನು ತಲುಪಿ. ಉದ್ಯೋಗ ಸಿಗದೆ ಸಂಕಷ್ಟದಲ್ಲಿರುವ ಹಾಗೂ ಉದ್ಯೋಗ ಕಳೆದುಕೊಂಡು ಸಮಸ್ಯೆಗೆ ತುತ್ತಾಗಿರುವ ಯುವಕರನ್ನು ಸಂಪರ್ಕಿಸಿ ಅಭಿಯಾನದ ಧ್ವನಿಯಾಗಿಸಲು ಪ್ರಯತ್ನಿಸಿ. ಈ ಮೂಲಕ ಕಾಂಗ್ರೆಸ್ ಪಕ್ಷ ಒಂದು ಯುವ ಧ್ವನಿಯಾಗಿ ಹೊರಹೊಮ್ಮುವಂತೆ ಮಾಡಿ ಎಂದು ಕರೆಕೊಟ್ಟರು.