ಬೆಂಗಳೂರು: ನಗರದಲ್ಲಿ ಹಾಡಹಗಲೇ ವ್ಯಕ್ತಿಗೆ ಚಾಕು ಇರಿದ ಘಟನೆ ಬಾಗಲೂರಿನ ಕಟ್ಟಿಗೇಹಳ್ಳಿ ಸರ್ಕಲ್ ಬಳಿ ನಡೆದಿದೆ. ಮಾರ್ವಾಡಿ ರಮೇಶ್ ಎಂಬಾತನ ಮೇಲೆ ದಾಳಿ ನಡೆಸಿರುವ ಪ್ರಶಾಂತ್ ಅಂಡ್ ಟೀಂ, ಹಫ್ತಾ ಹಣ ನೀಡಲು ನಿರಾಕರಿಸಿದ್ದಕ್ಕೆ ಚಾಕು ಹಾಕಿದೆ ಎನ್ನಲಾಗಿದೆ. ಹೀಗಾಗಿ ಕಮೀಷನರ್ ಕಚೇರಿ ಎದುರು ಮಾರ್ವಾಡಿಗಳ ಗುಂಪು ಸೇರಿದ್ದು, ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾರೆ.
ಸದ್ಯ ಕಮೀಷನರ್ ಕಚೇರಿಯ ಪ್ರಮುಖ ಗೇಟ್ ಕ್ಲೋಸ್ ಮಾಡಿ ಪೊಲೀಸರು ಸ್ಥಳದಲ್ಲಿ ಬಿಗಿಭದ್ರತೆ ಮಾಡಿದ್ದು, ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಆಗಮಿಸಿದ್ದಾರೆ.
ನಿನ್ನೆ ಕಟ್ಟಿಗೇನಹಳ್ಳಿ ಬಾಗಲೂರು ಕ್ರಾಸ್ ಯಲಹಂಕ ಸರ್ಕಲ್ ಬಳಿ ಹಫ್ತಾ ವಸೂಲಿಗೆ ಕಿಡಿಗೇಡಿಗಳು ಬಂದಿದ್ದು, ಹಣ ಕೊಡದೇ ಇದ್ದಿದ್ದಕ್ಕಾಗಿ ರಮೇಶ್ ಎಂಬುವವರ ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದರು. ಕೂಡಲೇ ಯಲಹಂಕ ಸ್ಟೇಷನ್ ನಲ್ಲಿ ದೂರು ಕೊಟ್ಟಿದ್ದು, ಆದರೆ ಇದುವರೆಗೂ ಆರೋಪಿಗಳನ್ನ ಬಂಧಿಸಿಲ್ಲ.
ಪೊಲೀಸರು ಎಫ್ಐಆರ್ ಹಾಕಿದ್ದೇವೆ, ಆರೋಪಿಗಳನ್ನು ಸೆರೆ ಹಿಡಿಯುತ್ತೇವೆ ಅಂತ ಹೇಳ್ತಾರೆ. ಆದರೆ, ಇಂತಹ ಘಟನೆ ನಿತ್ಯ ನಡೆಯುತ್ತಿರುವ ಕಾರಣ,ವ್ಯಾಪಾರಸ್ಥರಿಗೆ ನ್ಯಾಯ ಸಿಗುವವರೆಗೂ ನಾವು ಧರಣಿ ಮುಂದುವರೆಸುತ್ತೇವೆ ಎಂದು ಧರಣಿಯಲ್ಲಿ ಭಾಗಿಯಾಗಿರುವ ಸುಮಾರು 300 ಜನ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಘಟನೆ: ಮಾರ್ವಾಡಿ ರಮೇಶ್ ಮೇಲೆ ಪ್ರಶಾಂತ್ ಅಂಡ್ ಟೀಂ ಹಫ್ತಾ ಹಣ ನೀಡಲು ಬೇಡಿಕೆ ಇಟ್ಟಿದ್ದರು. ರಮೇಶ್ ನಿರಾಕರಿಸಿದ್ದಕ್ಕೆ ಚಾಕು ಇರಿತ ಮಾಡಿದ್ದಾರೆ. ಆಟೋದಲ್ಲಿ ಬಂದಿದ್ದ ಪ್ರಶಾಂತ್ ಸೇರಿ ನಾಲ್ವರು ಈ ಕೃತ್ಯ ಮಾಡಿದ್ದು, ಪರಿಣಾಮ ರಮೇಶ್ ಎದೆ ಮತ್ತು ಹೊಟ್ಟೆಗೆ ತೀವ್ರ ಗಾಯವಾಗಿತ್ತು. ಗಾಯಾಳು ರಮೇಶ್ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರೆದಿದೆ.