ಬೆಂಗಳೂರು: ಹುತಾತ್ಮರ ದಿನಾಚರಣೆ ಹಿನ್ನಲೆ ರೇಸ್ ಕೋರ್ಸ್ ರಸ್ತೆ ಬಳಿಯ ಕಾಂಗ್ರೆಸ್ ಭವನದಲ್ಲಿ ಗಾಂಧಿ ಪುತ್ಥಳಿ ಅನಾವರಣಗೊಳಿಸಲಾಯಿತು.
ಬಳಿಕ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್ ನಂತಹ ಮತಾಂಧ ಸಂಘಗಳು ಗಾಂಧೀಜಿಯವರ ವಿಚಾರಧಾರೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಮಹಾತ್ಮನನ್ನು, ಹಿಂದೂ ಮಹಾ ಸಭಾ ಮತ್ತು ಆರ್ಎಸ್ಎಸ್ನವರು ಇದೇ ದಿನ 1948 ರಲ್ಲಿ ಸಂಚು ಮಾಡಿ ಕೊಂದುಹಾಕಿದ್ರು. ಆದ್ರೆ ಇವರು ದೇಶದ್ರೋಹಿಗಳಲ್ಲ. ಆದ್ರೆ ಇಂದಿನ ದಿನಗಳಲ್ಲಿ ಸಿಎಎ, ಎನ್ಆರ್ಸಿ ಕಾಯ್ದೆ ವಿರೋಧಿಸಿದವರನ್ನೆಲ್ಲಾ ದೇಶದ್ರೋಹಿಗಳು ಅನ್ತಾರೆ. ಜಲಿಯನ್ ವಾಲಾ ಭಾಗ್ ಘಟನೆಯಲ್ಲಿ ನೂರಾರು ಜನ ಅಮಾಯಕರನ್ನು ಕೊಂದುಹಾಕಿದ ದಿನಗಳು ಇಂದಿನ ಸ್ಥಿತಿಯಲ್ಲಿ ನೆನಪಾಗ್ತಿದೆ ಎಂದರು. ಧರ್ಮದ ಆಧಾರದಲ್ಲಿ ದೇಶ ವಿಭಜನೆ ಆಗಲೇಬಾರದು ಎಂದರು.
ದಿನೇಶ್ ಗುಂಡೂರಾವ್ ಮಾತನಾಡಿ, ಸಂಸ್ಕೃತಿ ಸಚಿವ ಸಿಟಿ ರವಿ, ಕೇಂದ್ರದ ಅನುರಾಗ್ ಠಾಕೂರ್, ಕಂದಾಯ ಸಚಿವ ಆರ್. ಅಶೋಕ್ ಭಾಷಣ ಮಾಡ್ತಾ ದೇಶದ್ರೋಹಿಗಳಿಗೆ ಶೂಟ್ ಮಾಡ್ಬೇಕು ಅನ್ತಾರೆ. ಆದ್ರೆ, ದೇಶದ್ರೋಹಿ ಯಾರು ಅನ್ನೋದು ಯಾರು ನಿರ್ಧರಿಸೋದು ಎಂದರು. ಸಹನೆ ಇಲ್ಲದ, ಫ್ಯಾಸಿಸ್ಟ್ ಮನೋಸ್ಥಿತಿಯ ಸರ್ಕಾರ ಆಳುತ್ತಿದೆ. ಸಿಎಎ ವಿರುದ್ಧವಾದ ನಾಟಕ ಮಾಡಿದ ಶಾಲಾ ಮಕ್ಕಳನ್ನೂ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಶಾಲೆ ಮೇಲೆ ಸೆಡಿಷನ್ ಪ್ರಕರಣ ದಾಖಲಿಸಿರೋದು ಎಷ್ಟು ಸರಿ ಎಂದರು.
ಮಾಜಿ ಸಂಸದ ಉಗ್ರಪ್ಪ ಮಾತನಾಡಿ, 1934 ರಿಂದ ಸುಮಾರು ಆರು ಬಾರಿ ಗಾಂಧೀ ಹತ್ಯೆಗೆ ಮತೀಯವಾದಿಗಳು ಪ್ರಯತ್ನಿಸಿದ್ದರು. ಮನುವಾದಕ್ಕೆ ಗಾಂಧೀಜಿಯವರ ಬೆಂಬಲ ಇರುತ್ತಿದ್ರೆ ನಾಥೂರಾಮ್ ಗೋಡ್ಸೆ ಕೊಲ್ಲುತ್ತಿರಲಿಲ್ಲ ಎಂದರು.
ಬಳಿಕ ಸಭೆಯಲ್ಲಿ ಮಾತನಾಡಿದ ಕೆ.ಜೆ.ಜಾರ್ಜ್, ಗಾಂಧೀಜಿ ಬ್ರಿಟೀಷರ ಜೊತೆ ಹೋರಾಟ ಮಾಡಿದ್ದರು. ಹೋರಾಟದ ಫಲವಾಗಿಯೇ ಉತ್ತಮ ಸಂವಿಧಾನ ಬಂದಿದೆ. ಇಂದು ಅಧಿಕಾರಕ್ಕೆ ಬಂದವರು ಸಮಾಜ ಒಡೆಯುತ್ತಿದ್ದಾರೆ. ಧರ್ಮದ ಆಧಾರದಲ್ಲಿ ರಾಜಕೀಯ ಮಾಡ್ತಿದ್ದಾರೆ. ಹಿಂದು ಧರ್ಮ ಸಹಿಷ್ಣುತೆಯಿಂದ ಇರುವಂತದ್ದು. ಶೇ 90 ರಷ್ಟು ಇರುವ ಹಿಂದೂಗಳು ಬೇಧಬಾವ ಮಾಡಿಲ್ಲ. ಆದರೆ ಈಗ ಧರ್ಮ ಒಡೆಯುವ ಕೆಲಸ ಮಾಡ್ತಿದ್ದಾರೆ. ಸಿಎಎ, ಎನ್ಆರ್ಸಿ ತಂದು ಜನರನ್ನ ಒಕ್ಕಲೆಬ್ಬಿಸುತ್ತಿದ್ದಾರೆ. ಜನರಲ್ಲಿ ಭಯದ ವಾತಾವರಣ ಮೂಡಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕ ಕೆ.ಜೆ ಜಾರ್ಜ್, ಮಾಜಿ ಸಂಸದ ವೀರಪ್ಪ ಮೊಯ್ಲಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವೆ ರಾಣಿ ಸತೀಶ್, ವಿ.ಆರ್.ಸುದರ್ಶನ್,ಮಾಜಿ ಸಂಸದ ಉಗ್ರಪ್ಪ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಭಾಗಿಯಾಗಿದ್ದರು.