ಬೆಂಗಳೂರು: ರಾಜ್ಯಮಟ್ಟದ ಕೃಷಿ ಮೇಳವನ್ನು ಮಾರ್ಚ್ 5ರಿಂದ 7ರವರೆಗೆ ಹೊನ್ನಾಳಿಯಲ್ಲಿ ಆಯೋಜಿಸಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಹಿರೇಕಲ್ಮಠದ ಶಿವಾಚಾರ್ಯ ಸ್ವಾಮಿಗಳ ಚಂದ್ರ ಸ್ಮರಣೆ ಅಂಗವಾಗಿ ಮಾ. 5, 6 ಮತ್ತು 7ರಂದು ಮೇಳ ಏರ್ಪಡಿಸಲಾಗಿದೆ. ಮಠ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಕೃಷಿ ಮೇಳ ಹಮ್ಮಿಕೊಳ್ಳಲಾಗಿದ್ದು, ಕೃಷಿ ಮೇಳಕ್ಕೆ ಮೊದಲ ದಿನ ಹಿರಿಯ ನಟ ಶಿವರಾಜ್ಕುಮಾರ್ ಚಾಲನೆ ನೀಡಲಿದ್ದಾರೆ. ಪಂಚಪೀಠಾಧೀಶರು, ಸಚಿವರು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಎರಡನೇ ದಿನ ಯದುವೀರ್ ಒಡೆಯರ್, ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮೂರನೇ ದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಎಲ್ಲಾ ಪ್ರಮುಖ ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಾವಯವ ಕೃಷಿ, ಸುಧಾರಿತ ತಳಿಗಳು, ಸುಧಾರಿತ ತಂತ್ರಜ್ಞಾನ, ಇಸ್ರೇಲ್ ಮಾದರಿ ತಾಂತ್ರಿಕತೆ, ವಿವಿಧ ಬಿತ್ತನೆ ಬೀಜಗಳಲ್ಲಿ ಸುಧಾರಿತ ತಳಿಯ ಬಳಕೆ ಬಗ್ಗೆ ವಸ್ತು ಪ್ರದರ್ಶನ ಸೇರಿದಂತೆ ನೂತನ ಯಂತ್ರೋಪಕರಣಗಳ ಪ್ರದರ್ಶನ ಏರ್ಪಡಿಸಲಾಗಿದೆ. ಜೊತೆಗೆ ನುರಿತ ಕೃಷಿ ತಜ್ಞರಿಂದ ಉಪನ್ಯಾಸ ಸಹ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.