ಬೆಂಗಳೂರು: ರಾಜ್ಯದಲ್ಲಿ ಮತ್ತೆ ಬಸ್ ಸಂಚಾರ ಸ್ಥಗಿತವಾಗುತ್ತಾ? ಮತ್ತೆ ಮುಷ್ಕರಕ್ಕೆ ಕರೆ ನೀಡ್ತಾರಾ ಸಾರಿಗೆ ನೌಕರರು? ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಡೆಡ್ಲೈನ್ ಮುಗಿಯುತ್ತಾ ಬಂದರೂ ಸರ್ಕಾರ ನೌಕರರ ಯಾವ ಬೇಡಿಕೆಯನ್ನೂ ಈಡೇರಿಸಿಲ್ಲ ಎಂದು ತಿಳಿದುಬಂದಿದೆ.
ಮೂರು ತಿಂಗಳ ಒಳಗೆ 9 ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ರಾಜ್ಯ ಸರ್ಕಾರ, ಇನ್ನೂ ಯಾವ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ರಾಜ್ಯ ಸಾರಿಗೆ ನೌಕರರು ದೂರುತ್ತಿದ್ದಾರೆ.
ಡಿಸೆಂಬರ್ನಲ್ಲಿ ನಾಲ್ಕು ದಿನ ಮುಷ್ಕರ ನಡೆಸಿದ್ದ ಸಾರಿಗೆ ನೌಕರರು, ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಹೋರಾಟ ನೆಡೆಸಿದ್ದರು. ಈ ಸಂಬಂಧ ನಡೆದ ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮತನಾಡಿ ಮಾರ್ಚ್ 15 ರ ತನಕ ಡೆಡ್ಲೈನ್ ಇದೆ. ಅದರ ಒಳಗೆ ಸಾರಿಗೆ ನೌಕರರ ಎಲ್ಲಾ ಬೇಡಿಕೆ ಈಡೇರಿಸಬೇಕು ಎಂದರು.
ಕೊಟ್ಟ ಮಾತನ್ನು ಸರ್ಕಾರ ಮರೆಯಬಾರದು. ಇನ್ನೂ ಸಮಯದ ಅವಕಾಶ ಇದೆ, ಹೀಗಾಗಿ ಸರ್ಕಾರದ ಗಮನಕ್ಕೆ ತರುತ್ತಿದ್ದೇನೆ. ಅಷ್ಟರ ಒಳಗೆ ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು.
ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕು. ಸರ್ಕಾರ 5 ಬೇಡಿಕೆ ಈಡೇರಿಸಿದೆ ಅಂತ ಹೇಳ್ತಿದೆ. ಆದರೆ ಯಾವುದೇ ಭರವಸೆ ಈಡೇರಿಸಿಲ್ಲ. ಸರ್ಕಾರ ಕೊಟ್ಟ ಮಾತನ್ನು ಆ ಸಮಯದ ಒಳಗೆ ಈಡೇರಿಸಲಿಲ್ಲ ಅಂದ್ರೆ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೋಡಿಹಳ್ಳಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬ ಡಿಸಿಎಂ ಸವದಿ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ಯಾರು, ಅವರಿಗೆ ಯಾಕೆ ಹೇಳಬೇಕು ಎಂದು ಉತ್ತರ ನೀಡಬೇಡಿ. ಸಾರಿಗೆ ನೌಕರರ ಬೇಡಿಕೆ ಈಡೇರಿಸಿ. ತಪ್ಪುಗಳನ್ನು ತಿದ್ದಿಕೊಂಡು ನಷ್ಟವನ್ನ ಸರಿಪಡಿಸಿ. ಅದನ್ನು ಬಿಟ್ಟು ಇವರು ಯಾರು ಅವರು ಯಾರು ಅಂತ ಕೇಳಬೇಡಿ ಎಂದು ಉತ್ತರಿಸಿದರು.
ಸಾರಿಗೆ ನೌಕರರ ಬೇಡಿಕೆಗಳು:
ಕೋವಿಡ್ 19 ಸೋಂಕು ತಗುಲಿ ಮೃತಪಟ್ಟ ಕುಟುಂಬಕ್ಕೆ 30 ಲಕ್ಷ ಪರಿಹಾರ
ಅಂತರ್ ನಿಗಮ ವರ್ಗಾವಣೆ
ತರಬೇತಿ ಅವಧಿ ಎರಡು ವರ್ಷದಿಂದ ಒಂದು ವರ್ಷಕ್ಕೆ ಇಳಿಕೆ
ಕಿರುಕುಳ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ
ಆರನೇ ವೇತನ ಆಯೋಗ ಜಾರಿ ಮಾಡುವಂತೆ ಒತ್ತಾಯ
ನಾಟ್ ಇಶ್ಯೂಡ್ ನಾಟ್ ಕಲೆಕ್ಟೆಡ್ ವ್ಯವಸ್ಥೆ ಜಾರಿ
ಸಾರಿಗೆ ನಿಗಮದಲ್ಲಿ ಮಾನವ ಸಂಪನ್ಮೂಲ ನಿರ್ವಹಣೆಗೆ ಎಚ್ ಆರ್ ಎಂ ಎಸ್ ವ್ಯವಸ್ಥೆ ಜಾರಿ
ಉಚಿತ ಆರೋಗ್ಯ ಸೇವೆ ಕಲ್ಪಿಸುವಂತೆ ಆಗ್ರಹ