ಬೆಂಗಳೂರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿವಾಸ ಇಂದು ಹಲವು ಗಣ್ಯರ ಭೇಟಿ ಮೂಲಕ ಗಮನ ಸೆಳೆದವು.
ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸಕ್ಕೆ ಹಲವು ಗಣ್ಯರು ಭೇಟಿಕೊಟ್ಟು ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಇನ್ನೊಂದೆಡೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಹಲವು ಗಣ್ಯರು ಪಕ್ಷಾತೀತವಾಗಿ ಭೇಟಿ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿರುವುದು ವಿಶೇಷವಾಗಿತ್ತು.
ಇಂದು ಬೆಳಗ್ಗೆ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಉಭಯ ನಾಯಕರು ಮಧ್ಯಾಹ್ನ ನಂತರದ ಕಾಲಾವಧಿಯನ್ನು ಮುಖಂಡರ ಭೇಟಿಗೆ ಮೀಸಲಿಟ್ಟರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿವಾಸಕ್ಕೆ ಮಾಜಿ ಗೃಹ ಸಚಿವ ಕೆ ಜೆ ಜಾರ್ಜ್ ಅವರು ಭೇಟಿ ಮಾಡಿ, ಸಮಾಲೋಚಿಸಿದರು.
ಬೆಳಗಿನ ಸಮಾರಂಭದಲ್ಲಿ ಭಾಗವಹಿಸದೇ ಜಾರ್ಜ್ ಸುದ್ದಿಯಾಗಿದ್ದರು. ಆದರೆ, ಸಂಜೆ ಡಿಕೆಶಿ ನಿವಾಸಕ್ಕೆ ಆಗಮಿಸಿ ಸುದೀರ್ಘ ಸಮಾಲೋಚನೆ ನಡೆಸಿ ವಿವಿಧ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.
ಅಚ್ಚರಿಯ ಭೇಟಿ : ಮಾಜಿ ಸಚಿವ ರೇವೂ ನಾಯಕ ಬೆಳಮಗಿ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು. 2008ರಲ್ಲಿ ಬಿಜೆಪಿಯಿಂದ ಗೆದ್ದು 2013ರಲ್ಲಿ ಸೋತಿದ್ದ ಮಾಜಿ ಸಚಿವ ರೇವೂ ನಾಯಕ ಬೆಳಮಗಿ ಅವರು 2018ರಲ್ಲಿ ಕಲಬುರಗಿ ಗ್ರಾಮಾಂತರ ವಿಧಾನಸಭೆ ಕ್ಷೇತ್ರದಿಂದ ತಮ್ಮ ಬದಲು ಬಸವರಾಜ್ ಮತ್ತಿಮೂಡ್ಗೆ ಟಿಕೆಟ್ ಸಿಗದೆ ಬೇಸರಗೊಂಡು ಜೆಡಿಎಸ್ಗೆ ಸೇರ್ಪಡೆ ಆಗಿದ್ದರು.
ಆದರೆ, ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿ ಬಂದಿತ್ತು. ಇದಾದ ನಂತರ ರಾಜಕೀಯವಾಗಿ ಅಷ್ಟಾಗಿ ಕಾಣಿಸಿಕೊಳ್ಳದೆ ಅವರು ಇಂದು ಡಿ.ಕೆ.ಶಿವಕುಮಾರ್ ಭೇಟಿಯಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎಂಬ ಅನುಮಾನಗಳು ಹುಟ್ಟು ಹಾಕಿದ್ದು, ಸೇರ್ಪಡೆ ವಿಚಾರವಾಗಿ ಡಿಕೆಶಿ ಜೊತೆ ಅವರು ಸಮಾಲೋಚಿಸಿದ್ದಾರೆ ಎಂಬ ಮಾಹಿತಿ ಇದೆ.
ವರದಿ ಸಲ್ಲಿಕೆ : ಮಾಜಿ ಸಚಿವ ಹೆಚ್ ಎಂ ರೇವಣ್ಣ, ಕಾಂಗ್ರೆಸ್ ಬಾಗಲಕೋಟೆ ಜಿಲ್ಲಾಧ್ಯಕ್ಷ ನಂಜಯ್ಯನಮಠ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ನಿಂದ ಕೋವಿಡ್ ಪರಿಸ್ಥಿತಿ ನಿರ್ವಹಣೆ ಕುರಿತ ವರದಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಶುಕ್ರವಾರ ಸಲ್ಲಿಸಿದರು. ಇದಾದ ಬಳಿಕ ಎಐಸಿಸಿ ವೀಕ್ಷಕ, ತೆಲಾಂಗಣ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಧು ಯಕ್ಷಿಗೌಡ ಅವರು ಭೇಟಿ ಮಾಡಿ, ಸಮಾಲೋಚಿಸಿದರು.
ಸಿದ್ದರಾಮಯ್ಯ ನಿವಾಸಕ್ಕೆ ವಿವಿಧ ಮುಖಂಡರು ಭೇಟಿ :
ಸಿದ್ದರಾಮಯ್ಯ ನಿವಾಸಕ್ಕೆ ವಿವಿಧ ಮುಖಂಡರು ಇಂದು ಭೇಟಿ ಕೊಟ್ಟು ಸಮಾಲೋಚಿಸಿದರು. ನಿನ್ನೆ 74ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿರುವ ಅವರಿಗೆ ಮುಖಂಡರು ಶುಭ ಹಾರೈಸಿದರು. ಸಚಿವ ಮುರುಗೇಶ್ ನಿರಾಣಿ ಅವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಇದಾದ ಬಳಿಕ ಮಾಜಿ ಸಚಿವರಾದ ಪಿಜಿಆರ್ ಸಿಂಧ್ಯಾ, ಸಿಎಂ ಇಬ್ರಾಹಿಂ, ಆರ್ ಬಿ ತಿಮ್ಮಾಪುರ, ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರು ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ಮಾಜಿ ಮುಖ್ಯಮಂತ್ರಿ, ದಿ.ರಾಮಕೃಷ್ಣ ಹೆಗಡೆ ಅವರ ಪುತ್ರಿ ಮಮತಾ ನಿಚ್ಚಾನಿ ಮತ್ತವರ ಕುಟುಂಬದವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಹುಟ್ಟು ಹಬ್ಬದ ಶುಭಾಶಯ ಕೋರಿದರು.